ಸಾರಾಂಶ
ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಇರಾನಿನಿಂದ ಅಪಹರಿಸಲು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐಗೆ ನೆರವಾಗಿದ್ದ ಹಾಗೂ ಪಾಕ್ ‘ವಿದ್ವಾಂಸನೂ’ ಆಗಿರುವ ಉಗ್ರ ಮುಫ್ತಿ ಷಾ ಮಿರ್‌ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಇಸ್ಲಾಮಾಬಾದ್: ಭಾರತೀಯ ನೌಕಾಸೇನೆಯ ಮಾಜಿ ನೌಕಾಧಿಕಾರಿ, ಸದ್ಯ ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಇರಾನಿನಿಂದ ಅಪಹರಿಸಲು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐಗೆ ನೆರವಾಗಿದ್ದ ಹಾಗೂ ಪಾಕ್ ‘ವಿದ್ವಾಂಸನೂ’ ಆಗಿರುವ ಉಗ್ರ ಮುಫ್ತಿ ಷಾ ಮಿರ್‌ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಹಿಂಸಾಚಾರಪೀಡಿತ ಬಲೂಚಿಸ್ತಾನದ ಕೆಚ್ ಎಂಬಲ್ಲಿ ಈ ಘಟನೆ ನಡೆದಿದೆ.
ರಾತ್ರಿಯ ಪ್ರಾರ್ಥನೆ ಮುಗಿಸಿ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ನಂತರ ಮುಫ್ತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.ಪಾಕಿಸ್ತಾನದ ಮೂಲಭೂತವಾದಿ ಪಕ್ಷವಾದ ಜಮೈತ್ ಉಲೇಮಾ ಇಸ್ಲಾಂ(ಜೆಯುಐ)ದ ಸದಸ್ಯನೂ ಆಗಿದ್ದ ಮುಫ್ತಿ, ವಿದ್ವಾಂಸ ಎಂದು ಹೇಳಿಕೊಂಡು ಮಾವನಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ನಿರತನಾಗಿದ್ದ. ಐಎಸ್‌ಐ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಈತ ಆಗಾಗ್ಗೆ ಪಾಕ್‌ನ ಉಗ್ರ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ, ಭಾರತದೊಳಗೆ ಉಗ್ರರ ನುಸುಳುವಿಕೆಗೆ ನೆರವು ನೀಡುತ್ತಿದ್ದ.
ಕಳೆದ ವಾರವಷ್ಟೆ ಜೆಯುಐನ ಇಬ್ಬರು ಮುಖಂಡರನ್ನು ಬಲೂಚಿಸ್ತಾನದ ಖುಜ್ದಾರ್‌ನಲ್ಲಿ ಹತ್ಯೆ ಮಾಡಲಾಗಿತ್ತು.ಪಾಕ್‌ನ ಬಲೂಚಿಸ್ತಾನದಲ್ಲಿ ಪ್ರತ್ಯೇಕವಾದ ಚಳವಳಿ ತೀವ್ರಗೊಂಡಿದ್ದು, ಈ ಪ್ರಾಂತ್ಯದಲ್ಲಿ ಹಲವು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ರಾಜಕಾರಣಿಗಳನ್ನು ಸರ್ಕಾರವೇ ಹತ್ಯೆ ಮಾಡಿದೆ ಎಂಬ ಆರೋಪವಿದೆ. ಪ್ರತ್ಯೇಕವಾದಿಗಳು ಮತ್ತು ಪಾಕ್ ಮಿಲಿಟರಿ ನಡುವಿನ ಸಂಘರ್ಷದಲ್ಲಿ ಕನಿಷ್ಠ 18 ಭದ್ರತಾಪಡೆಗಳು ಹಾಗೂ 23 ಉಗ್ರರು ಈ ವರ್ಷ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇರಾನ್‌ನಿಂದ ಜಾಧವ್ ಅಪಹರಣ:ನೌಕಾಸೇನೆಯಿಂದ ಅವಧಿಗೂ ಪೂರ್ವ ನಿವೃತ್ತಿ ಪಡೆದು ಇರಾನ್‌ನ ಛಾಬಹಾರ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕುಲಭೂಷಣ್ ಜಾಧವ್ ಅವರಿಗೆ ಗೂಢಚರ್ಯೆ ಆರೋಪದ ಮೇರೆಗೆ 2017ರಂದು ಪಾಕಿಸ್ತಾನದಲ್ಲಿ ಮರಣದಂಡನೆ ವಿಧಿಸಲಾಗಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ಮಧ್ಯಪ್ರವೇಶದಿಂದ ಕುಲಭೂಷಣ್ ಅವರ ಮರಣದಂಡನೆ ಜಾರಿಗೆ ಪಾಕ್ ಸರ್ಕಾರ ಸದ್ಯಕ್ಕೆ ತಡೆ ನೀಡಿದೆ.
ಕುಲಭೂಷಣ್ ಅವರನ್ನು 2016ರಲ್ಲಿ ಇರಾನ್-ಪಾಕಿಸ್ತಾನ ಗಡಿಯಲ್ಲಿ ಅಪಹರಿಸಿ ಪಾಕಿಸ್ತಾನಿ ಸೇನೆಗೆ ಹಸ್ತಾಂತರಿಸಲಾಗಿತ್ತು. ಸದ್ಯ ಅವರು ಪಾಕ್ ಜೈಲಲ್ಲಿದ್ದಾರೆ. ಇವರ ಕಿಡ್ನಾಪ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮತ್ತೊಬ್ಬ ಉಗ್ರ ಮುಲ್ಲಾ ಒಮರ್ ಇರಾನಿಯನ್ನು ಐಎಸ್‌ಐನ ಬೆಂಬಲಿಗರೇ 2020ರಲ್ಲಿ ಗುಂಡುಹಾರಿಸಿ ಹತ್ಯೆ ಮಾಡಿದ್ದರು.ಅನಾಮಿಕರಿಂದ 20 ಉಗ್ರರ ಹತ್ಯೆ:
ಪಾಕಿಸ್ತಾನದಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮುಖ್ಯವಾಗಿ ಭಾರತದ ವಿರುದ್ಧದ ಉಗ್ರಕೃತ್ಯದಲ್ಲಿ ಪಾಲ್ಗೊಂಡಿದ್ದ ಆರೋಪ ಹೊತ್ತಿದ್ದ ಹಲವು ಉಗ್ರರನ್ನು ಅನಾಮಿಕರು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪವಿದೆ. ಇದರ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ.