ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ 2 ತಾಸು ಪಾಕ್ ಹಡಗು ಬೆನ್ನಟ್ಟಿ 7 ಭಾರತೀಯ ಬೆಸ್ತರ ರಕ್ಷಣೆ

| Published : Nov 19 2024, 12:49 AM IST / Updated: Nov 19 2024, 04:51 AM IST

ಸಾರಾಂಶ

ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ಹಡಗಿನಿಂದ ಬಂಧಿಸಲ್ಪಟ್ಟಿದ್ದ 7 ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ರಕ್ಷಿಸಿದೆ.

ಮುಂಬೈ: ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ಹಡಗಿನಿಂದ ಬಂಧಿಸಲ್ಪಟ್ಟಿದ್ದ 7 ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ರಕ್ಷಿಸಿದೆ.

ನ.17 ರ ಭಾನುವಾರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮಧ್ಯಾಹ್ನ ಮೀನುಗಾರಿಕೆ ರಹಿತ ವಲಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೀನುಗಾರಿಕಾ ದೋಣಿಯಿಂದ ಕೋಸ್ಟ್ ಗಾರ್ಡ್‌ಗೆ ತೊಂದರೆಯ ಸಂಕೇತ ರವಾನೆ ಆಗಿದೆ. ಆಗ ಕರಾವಳಿ ಪಡೆ ಹಡಗು 2 ತಾಸು ಕಾಲ ಪಾಕ್‌ ಹಡಗನ್ನು ಬೆನ್ನಟ್ಟಿ ಬಂಧಿತರಾಗಿದ್ದ 7 ಭಾರತೀಯ ಬೆಸ್ತರ ರಕ್ಷಿಸಿದೆ.

ಬಿಷ್ಣೋಯಿ ಸೋದರ ಅನ್ಮೋಲ್‌ ಅಮೆರಿಕದಲ್ಲಿ ಬಂಧನ

ನವದೆಹಲಿ: ನಟ ಸಲ್ಮಾನ್‌ ಖಾನ್‌ ಮನೆ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ, ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಸೇರಿ ಹಲವು ಕೇಸುಗಳಲ್ಲಿ ಆರೋಪಿಯಾದ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸೋದರ, ಅನ್ಮೋಲ್‌ ಬಿಷ್ಣೋಯಿಯನ್ನು ಅಮೆರಿಕ ಪೊಲೀಸರು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಿದ್ದಾರೆ.ಸಲ್ಮಾನ್‌ ಖಾನ್‌ ಮನೆ ಮೇಲೆ ದಾಳಿ ನಡೆಸಿದ್ದ ಅನ್ಮೋಲ್‌ ವಿರುದ್ಧ ಮುಂಬೈ ಪೊಲೀಸರು ಏಪ್ರಿಲ್‌ನಲ್ಲಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿತ್ತು. ಅನ್ಮೋಲ್‌ ಅಮೆರಿಕದಲ್ಲಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ಬಂಧನಕ್ಕೆ ಅಮೆರಿಕ ಪೊಲೀಸರನ್ನು ಸಹಾಯ ಕೋರಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಐಎನ್‌ಎ) ಮಾಹಿತಿ ನೀಡಿದೆ.

ಗಾಯಕ ಸಿಧೂ ಮೂಸೆವಾಲಾ ಹತ್ಯೆ ಸೇರಿ ಪ್ರಮುಖ ಅಪರಾಧಗಳಲ್ಲಿ ಅನ್ಮೋಲ್‌ ಭಾರತಕ್ಕೆಬೇಕಾಗಿದ್ದಾನೆ.

ಆಪ್‌ ಬಿಟ್ಟ ಒಂದೇ ದಿನದಲ್ಲಿ ಗೆಹ್ಲೋಟ್‌ ಬಿಜೆಪಿ ಸೇರ್ಪಡೆ

ನವದೆಹಲಿ: ದಿಲ್ಲಿ ಸಚಿವ ಸ್ಥಾನಕ್ಕೆ ಹಾಗೂ ಆಪ್‌ಗೆ ಭಾನುವಾರವಷ್ಟೇ ರಾಜೀನಾಮೆ ನೀಡಿದ್ದ ದೆಹಲಿ ಮಾಜಿ ಸಚಿವ ಕೈಲಾಶ್‌ ಗೆಹ್ಲೋಟ್‌ ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್‌ ಹಾಗೂ ಇತರರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು, ‘ನಾನು ಇ.ಡಿ., ಐಟಿ, ಸಿಬಿಐ ಭಯದಿಂದ ಬಿಜೆಪಿ ಸೇರಿದೆ ಎಂಬುದು ಸುಳ್ಳು’ ಎಂದರು.

ಶಾಸಕ ಶೋಕೀನ್‌ ಸಂಪುಟಕ್ಕೆ: ಈ ನಡುವೆ, ಜಾಟ್‌ ನಾಯಕರಾದ ಗೆಹ್ಲೋಟ್‌ ಆಪ್‌ ತೊರೆದ ಬೆನ್ನಲ್ಲೇ ದಿಲ್ಲಿ ಸಂಪುಟಕ್ಕೆ ಜಾಟ್‌ ಶಾಸಕ ರಘುವಿಂದರ್‌ ಶೋಕೀನ್ ಸೇರಿದ್ದಾರೆ. ಶೋಕೀನ್‌ ಸೋಮವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಶೋಕೀನ್‌ ಕೂಡ ಜಾಟ್‌ ನಾಯಕರು.ಮಾಜಿ ಕಾಂಗ್ರೆಸ್ಸಿಗ ಆಪ್‌ಗೆ: ಇನ್ನೊಂದೆಡೆ ಮಾಜಿ ಕಾಂಗ್ರೆಸ್ ಶಾಸಕ ಸುಮೇಶ್‌ ಶೋಕೀನ್‌ ಸೋಮವಾರ ಆಪ್‌ ಸೇರಿದರು.

ಗುಜರಾತ್‌: ರ್‍ಯಾಗಿಂಗ್‌ಗೆ 18ರ ಎಂಬಿಬಿಎಸ್‌ ವಿದ್ಯಾರ್ಥಿ ಬಲಿ

ಪಾಟನ್‌: ಸತತ 3 ಗಂಟೆಗಳ ಕಾಲ ನಿಲ್ಲಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಮಾನಸಿಕ ಹಾಗೂ ದೈಹಿಕವಾಗಿ ರ್‍ಯಾಗಿಂಗ್‌ಗೆ ಒಳಪಡಿಸಲಾಗಿದ್ದು, ಆತ ಕುಸಿದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಪಾಟನ್‌ನಲ್ಲಿ ನಡೆದಿದೆ. ಈ ಸಂಬಂಧ 15 ಹಿರಿಯ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಕಾಲೇಜಿಂದ ಹೊರದಬ್ಬಲಾಗಿದೆ.

ಮೊದಲ ವರ್ಷದ 11 ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುವ ನೆಪದಲ್ಲಿ ಅವರನ್ನೆಲ್ಲಾ 3ನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು 3 ತಾಸು ನಿಲ್ಲಿಸಿಕೊಂಡಿದ್ದರು. ಆಗ ಅನಿಲ್‌ ಮೆಥಾನಿಯಾ (18) ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.ಪ್ರಜ್ಞಾಹೀನನಾದ ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಪ್ರಜ್ಞೆ ಬಂದಾಗ ಆತನ ಹೇಳಿಕೆ ಪಡೆದುಕೊಳ್ಳಲಾಯಿತು. ಈ ವೇಳೆ ಆತ ರ್‍ಯಾಗಿಂಗ್‌ ಬಗ್ಗೆ ಬಾಯಿಬಿಟ್ಟ. ಆದರೆ ನಂತರ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ ಎನ್ನಲಾಗಿದೆ.

ಬಂಧುಗಳ ಆಕ್ರೋಶ: ಇದಕ್ಕೆ ಅನಿಲ್‌ನ ಸಂಬಂಧಿ ಪ್ರತಿಕ್ರಿಯಿಸಿ, ‘ಅನಿಲ್‌ನನ್ನು ಆಸ್ಪತ್ರೆಗೆ ಸೇರಿಸುವ ವಿಷಯ ಕಾಲೇಜಿನವರಿಂದ ತಿಳಿಯುತ್ತಿದ್ದಂತೆ ನಾವಲ್ಲಿಗೆ ತಲುಪಿದೆವು. ಹಿರಿಯ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್‌ ನಡೆದಿರುವುದು ತಿಳಿಯಿತು. ನಮಗೆ ನ್ಯಾಯ ಬೇಕು’ ಎಂದು ಆಗ್ರಹಿಸಿದ್ದಾರೆ.

ಕಾಲೇಜಿನ ಡೀನ್‌ ಮಾತನಾಡಿ, ‘ತನ್ನನ್ನು 3 ತಾಸು ನಿಲ್ಲಿಸಿ ರ್‍ಯಾಗಿಂಗ್‌ ಮಾಡಿರುವ ಬಗ್ಗೆ ಅನಿಲ್‌ ಪೊಲೀಸರಿಗೆ ತಿಳಿಸಿದ್ದಾನೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇವೆ’ ಎಂದರು.‘ಮಗನ ಸಾವಿನ ಕುರಿತು ಅನಿಲ್‌ನ ತಂದೆ ದೂರು ನೀಡಿದ್ದು, ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ. ಶವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರ್‍ಯಾಗಿಂಗ್‌ ಬಗ್ಗೆ ಮಾಹಿತಿ ನೀಡಿವಂತೆ ಕಾಲೇಜಿನವರಿಗೂ ಸೂಚಿಸಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಕೆ.ಕೆ. ಪಾಂಡ್ಯ ಹೇಳಿದ್ದಾರೆ.

ಪತ್ರಕರ್ತರ ಬಗ್ಗೆ ರಾಹುಲ್‌ ಅವಹೇಳನ: ಪ್ರೆಸ್‌ ಕ್ಲಬ್‌ ಖಂಡನೆ

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶವೊಂದರಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ‘ಪತ್ರಕರ್ತರು ಒಂದು ರೀತಿಯಲ್ಲಿ ಬಿಜೆಪಿ ಗುಲಾಮರು’ ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.ರಾಹುಲ್‌ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಮುಂಬೈ ಪ್ರೆಸ್‌ ಕ್ಲಬ್‌, ‘ಇಂತಹ ಮಾತು ಪತ್ರಕರ್ತರ ಸಮುದಾಯಕ್ಕೆ ಘಾಸಿ ಉಂಟುಮಾಡುತ್ತದೆ. ರಾಹುಲ್‌ ಯಾವತ್ತಾದರೂ ಭಾರತದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು, ಅವರಿಗಿರುವ ಕಷ್ಟಗಳಿಗೆ ಕಾರಣಗಳು ಹಾಗೂ ಒಟ್ಟಾರೆ ಪತ್ರಿಕೋದ್ಯಮದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರಾ’ ಎಂದು ಪ್ರಶ್ನಿಸಿದೆ.

ರಾಹುಲ್‌ ಗಾಂಧಿ ಹೇಳಿದ್ದೇನು?:

ಶನಿವಾರ ಅಮರಾವತಿಯಲ್ಲಿ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ, ‘ನಾನು ಮೀಸಲಾತಿ ಮಿತಿ ಹೆಚ್ಚಿಸಬೇಕು ಎಂದು ಹೇಳಿದರೆ ಪ್ರಧಾನಿ ಮೋದಿ ‘ರಾಹುಲ್‌ ಗಾಂಧಿ ಮೀಸಲಾತಿಗೆ ವಿರುದ್ಧವಾಗಿದ್ದಾರೆ’ ಎಂದು ಆರೋಪಿಸುತ್ತಾರೆ. ಅದನ್ನು ಮಾಧ್ಯಮಗಳೂ ಪ್ರಶ್ನಿಸದೆ ವರದಿ ಮಾಡುತ್ತವೆ. ಪತ್ರಕರ್ತರು ಬಿಜೆಪಿಗೆ ಸೇರಿದವರೇ ಆಗಿದ್ದಾರೆ. ಅವರು ನನ್ನನ್ನು ನೋಡಿ ನಕ್ಕಾಗ ನನಗೆ ‘ಹೌದೌದು, ನಾವು ಬಿಜೆಪಿಗೆ ಸೇರಿದವರು’ ಎಂದು ಹೇಳಿದಂತೆ ಅನ್ನಿಸುತ್ತದೆ. ಇದರಲ್ಲಿ ಅವರ ತಪ್ಪಿಲ್ಲ. ಅವರಿಗೆ ಕೆಲಸ ಬೇಕು, ಸಂಬಳ ಬೇಕು, ಮಕ್ಕಳನ್ನು ಸಾಕಬೇಕು, ಶಿಕ್ಷಣ ಕೊಡಿಸಬೇಕು, ಊಟ ಮಾಡಬೇಕು. ಅವರು ತಮ್ಮ ಮಾಲಿಕರ ವಿರುದ್ಧ ಕೆಲಸ ಮಾಡಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಅವರು ಗುಲಾಮರಿದ್ದಂತೆ’ ಎಂದು ಹೇಳಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಈ ವರದಿಗಳನ್ನು ಉಲ್ಲೇಖಿಸಿ ಮುಂಬೈ ಪ್ರೆಸ್‌ ಕ್ಲಬ್‌ ಖಂಡನೆ ವ್ಯಕ್ತಪಡಿಸಿದೆ.