ಸಾರಾಂಶ
ಇಸ್ಲಾಮಾಬಾದ್: ಆಪರೇಷನ್ ಸಿಂದೂರದ ಬಳಿಕ ಅಮೆರಿಕವನ್ನು ಮೆಚ್ಚಿಸಲು ಹೆಣಗಾಡುತ್ತಿರುವ ಪಾಕಿಸ್ತಾನ ಇದೀಗ ಅಪರೂಪದ ಖನಿಜಗಳನ್ನು ಅಮೆರಿಕಕ್ಕೆ ಕಳಿಸುವ ಮೂಲಕ ಮತ್ತೊಂದು ಹಂತದ ಸಂಬಂಧ ಬಲವರ್ಧನೆಗೆ ಯತ್ನಿಸಿದೆ.
ಇತ್ತೀಚೆಗೆ ಈ ಖನಿಜಗಳನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಟ್ರಂಪ್‌ಗೆ ಅಮೆರಿಕಭೇಟಿ ವೇಳೆ ತೋರಿಸಿದ್ದರು. ಅದರ ಬೆನ್ನಲ್ಲೇ ಆಂಟಿಮನಿ, ಕಾಪರ್ ಕಾನ್ಸನ್ಟ್ರೇಟ್, ನಿಯೋಡೈಮಿಯಂ ಮತ್ತು ಪ್ರಾಸಿಯೋಡೈಮಿಯಂನಂತಹ ಅಪರೂಪದ ಖನಿಜಗಳನ್ನು ಅಮೆರಿಕಕ್ಕೆ ರವಾನೆ ಮಾಡಿದೆ,ಸೆ.8ರಂದು ಅಮೆರಿಕದ ಸ್ಟ್ರಾಟೆಜಿಕ್ ಮೆಟಲ್ಸ್ ಸಂಸ್ಥೆಯು ಪಾಕಿಸ್ತಾನದ ಫ್ರಂಟಿಯರ್ ವರ್ಕ್ಸ್ ಆರ್ಗನೈಸೇಶನ್ (ಎಫ್‌ಡಬ್ಲ್ಯೂಒ) ಜತೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಅತ್ತ ಅಮೆರಿಕದ ಸಂಸ್ಥೆಯು ಪಾಕಿಸ್ತಾನದಲ್ಲಿ ಖನಿಜ ಸಂಸ್ಕರಣೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಸ್ಥಾಪಿಸಲು ಸುಮಾರು 45,000 ಕೋಟಿ ರು. ಹೂಡಿಕೆ ಮಾಡಲು ಯೋಜಿಸಿದೆ.
ಭಾರತದ ವಿರುದ್ಧ ಚೀನಾ ಶಸ್ತ್ರಾಸ್ತ್ರಗಳ ಅಸಾಧಾರಣ ಶೌರ್ಯ: ಪಾಕ್ ಬಣ್ಣನೆ
ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ, ತಾನೇ ಯುದ್ಧದಲ್ಲಿ ಗೆದ್ದಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುವುದನ್ನು ಮುಂದುವರಿಸಿದೆ. ಈ ಬಾರಿ ತನ್ನ ಆಪ್ತರಾಷ್ಟ್ರ ಚೀನಾದ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಅಭೂತಪೂರ್ವವಾಗಿ ಕೆಲಸ ಮಾಡಿದೆ ಎಂದು ಕೊಂಡಾಡಿದೆ.
ಬ್ಲೂಮ್‌ಬರ್ಗ್ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಪಾಕ್ ಸೇನೆಯ ಅಂತರ ಸೇವೆಗಳ ಸಾರ್ವಜನಿಕ ಸಂಪರ್ಕ ವಿಭಾಗದ ಮಹಾನಿರ್ದೇಶಕ ಲೆ.ಜ. ಅಹಮದ್ ಷರೀಫ್ ಚೌಧರಿ, ‘ಇತ್ತೀಚೆಗೆ ಭಾರತದ ವಿರುದ್ಧ ನಡೆದ 4 ದಿನಗಳ ಯುದ್ಧದಲ್ಲಿ ಚೀನಾದ ಶಸ್ತ್ರಾಸ್ತ್ರಗಳು ಅಸಾಧಾರಣ ಕೆಲಸ ಮಾಡಿವೆ. ಚೀನಾದ ವೇದಿಕೆಗಳು ಅತ್ಯುತ್ತಮವಾದ ಪ್ರದರ್ಶನ ನೀಡಿವೆ. ನಾವು ಎಲ್ಲ ವಿಧದ ತಂತ್ರಜ್ಞಾನಕ್ಕೂ ಮುಕ್ತರಾಗಿದ್ದೇವೆ. ಪಾಕಿಸ್ತಾನ ಭಾರತದ 7 ಯುದ್ಧವಿಮಾನಗಳನ್ನು ಹೊಡೆದುರುಳಿತು. ಆದರೆ ನಮ್ಮ ಯಾವುದೇ ವಿಮಾನವನ್ನು ಬೀಳಿಸಲು ಅವರಿಂದ ಸಾಧ್ಯವಾಗಲಿಲ್ಲ’ ಎಂದಿದ್ದಾರೆ.