ಸಾರಾಂಶ
ಭಾರತ ಕೈಗೊಂಡ ಆಪರೇಷನ್ ಸಿಂದೂರದಲ್ಲಿ ತನಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನದ ಸ್ಕ್ವಾಡ್ರನ್ ಲೀಡರ್ ಸೇರಿ ಅದರ 13 ಯೋಧರು ಸಾವನ್ನಪ್ಪಿದ್ದು ಈಗ ದೃಢಪಟ್ಟಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಇಸ್ಲಾಮಾಬಾದ್: ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರದಲ್ಲಿ ತನಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನದ ಹಣೆಬರಹ ಇದೀಗ ಅದು ಹಮ್ಮಿಕೊಂಡ ಕಾರ್ಯಕ್ರಮದಿಂದಲೇ ಜಗಜ್ಜಾಹೀರಾಗಿದೆ. ಸ್ಕ್ವಾಡ್ರನ್ ಲೀಡರ್ ಸೇರಿ ಅದರ 13 ಯೋಧರು ಸಾವನ್ನಪ್ಪಿದ್ದು ಈಗ ದೃಢಪಟ್ಟಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಆಪರೇಷನ್ ಸಿಂದೂರದ ವೇಳೆ ಸಾವನ್ನಪ್ಪಿದ್ದ ಸೇನಾಧಿಕಾರಿಗಳಿಗೆ ಪಾಕಿಸ್ತಾನದ ಸ್ವಾತಂತ್ರ್ಯದಿನವಾದ ಆ.14ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ, ತಮ್ಘ-ಇ-ಬಸಲತ್ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ಹವಾಲ್ದಾರ್ ಮುಹಮ್ಮದ್ ನವೀದ್, ನಾಯಕ್ ವಕಾರ್ ಖಾಲಿದ್ ಮತ್ತು ಲ್ಯಾನ್ಸ್ ನಾಯಕ್ ದಿಲಾವರ್ ಖಾನ್‌ಗೆ ನೀಡಲಾಗಿದೆ. ಅದೇ ರೀತಿ, ತಮ್ಘ-ಇ-ಜುರತ್ ಪ್ರಶಸ್ತಿಯನ್ನು ನಾಯಕ್ ಅಬ್ದುಲ್ ರೆಹಮಾನ್, ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ ಮತ್ತು ಸಿಪಾಯಿ ಅದೀಲ್ ಅಕ್ಬರ್ ಮೊದಲಾದವರಿಗೆ ಪ್ರದಾನ ಮಾಡಲಾಗಿದೆ.
ಭಾರತ ಭೋಲಾರಿ ವಾಯುನೆಲೆ ಮೇಲೆ ನಡೆಸಿದ ದಾಳಿಯಲ್ಲಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಸಾವನ್ನಪ್ಪಿದ್ದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. 13 ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನರನ್ನು ಕಳೆದುಕೊಂಡಿರುವುದಾಗಿಯೂ ಶತ್ರುದೇಶ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.