ಸಾರಾಂಶ
ವಿಶ್ವಸಂಸ್ಥೆ ಹಾಗೂ ಅಮೆರಿಕದಲ್ಲಿನ ಪಾಕಿಸ್ತಾನಿ ರಾಯಭಾರಿಗಳು ಸಹಿತ ಶಾಂತಿಮಂತ್ರ ಪಠಿಸಿದ್ದಾರೆ.
ವಾಷಿಂಗ್ಟನ್: ಭಾರತದ ದಾಳಿ ಭಯಕ್ಕೆ ಬೆಚ್ಚಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ಮಿತ್ರರಾದ 3 ಇಸ್ಲಾಮಿಕ್ ದೇಶಗಳ ಮೊರೆ ಹೋದ ಬೆನ್ನಲ್ಲೇ ವಿಶ್ವಸಂಸ್ಥೆ ಹಾಗೂ ಅಮೆರಿಕದಲ್ಲಿನ ಪಾಕಿಸ್ತಾನಿ ರಾಯಭಾರಿಗಳು ಸಹಿತ ಶಾಂತಿಮಂತ್ರ ಪಠಿಸಿದ್ದಾರೆ. ಭಾರತದ ಮನವೊಲಿಸಿ ಯುದ್ಧೋನ್ಮಾದ ತಣಿಸಬೇಕು ಎಂದು ವಿಶ್ವ ನಾಯಕರಿಗೆ ಮನವಿ ಮಾಡಿದ್ದಾರೆ.
ವಿಶ್ವಸಂಸ್ಥೆಯ ಪಾಕ್ ಪ್ರತಿನಿಧಿ ಅಸಿಮ್ ಇಫ್ತಿಕಾರ್ ಅಹ್ಮದ್ ಮಾತನಾಡಿ, ‘ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿವೆ. ಜವಾಬ್ದಾರಿಯುತ ರಾಷ್ಟ್ರಗಳಾದ ಇವು ಯುದ್ಧವನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು. ಅಣು ದಾಳಿಯ ಯುದ್ಧೋನ್ಮಾದ ಬೇಡ. ಅಂತಾರಾಷ್ಟ್ರೀಯ ವಲಯ ಕೂಡ ಈ ಯುದ್ಧೋನ್ಮಾದ ತಣಿಸಲು ಯತ್ನಿಸಬೇಕು’ ಎಂದಿದ್ದಾರೆ.
ಆದರೆ, ’ಪರಮಾಣು ಶಸ್ತ್ರಾಸ್ತ್ರಗಳು ಮೊದಲು ಬಳಕೆ ಆಗಬಾರದು. ಅದೇನೇ ಇದ್ದರೂ ಕೊನೆಯ ಆಯ್ಕೆ’ ಎಂಬ ನೀತಿಯನ್ನು ಪಾಕಿಸ್ತಾನ ಹೊಂದಿಲ್ಲ ಏಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಆ ಬಗ್ಗೆ ಉತ್ತರಿಸಲು ಅವರು ಹಿಂದೇಟು ಹಾಕಿದ್ದಾರೆ.
ಅತ್ತ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ರಿಜ್ವಾನ್ ಸಯೀದ್ ಪ್ರತ್ಯೇಕ ಸಮಾರಂಭವೊಂದರಲ್ಲಿ ಮಾತನಾಡಿ, ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿ ಹದಗೆಡಲು ಕಾಶ್ಮೀರ ಸಮಸ್ಯೆಯೇ ಮೂಲ ಕಾರಣ. ಯಾವುದೇ ದುಸ್ಸಾಹಸ ಅಥವಾ ತಪ್ಪು ಲೆಕ್ಕಾಚಾರವು ಪರಮಾಣು ದಾಳಿಗೆ ಕಾರಣವಾಗಬಹುದು. ಇದನ್ನು ಪರಿಹರಿಸುವಲ್ಲಿ, ಶಾಂತಿಯ ಪರವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾತ್ರ ಅತ್ಯಗತ್ಯ. ನಮಗೆ ಶಾಂತಿಯುತ ನೆರೆಹೊರೆಯವರು ಬೇಕು’ ಎಂದು ಹೇಳಿದ್ದಾರೆ.
ಪಿಒಕೆ ಉಗ್ರರ ಜಾಗ ಖಾಲಿ ಮಾಡಿಸಿದ ಪಾಕ್
ನವದೆಹಲಿ: 26 ಅಮಾಯಕರ ಬಲಿಪಡೆದ ಪಹಲ್ಗಾಂ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಭರದಿಂದ ನಡೆಸುತ್ತಿರುವ ತಯಾರಿ ಕಂಡು ಉಗ್ರಪೋಷಕ ಪಾಕಿಸ್ತಾನ ಬೆದರಿದಂತಿದೆ. ಪರಿಣಾಮವಾಗಿ, ಪಿಒಕೆಯಲ್ಲಿ (ಪಾಕ್ ಆಕ್ರಮಿತ ಕಾಶ್ಮೀರದಲ್ಲಿ) ಅಡಗಿ ಕುಳಿತು ಕಾಶ್ಮೀರದೊಳಗೆ ನುಸುಳಲು ಸಂಚು ರೂಪಿಸುತ್ತಿದ್ದ ಉಗ್ರರನ್ನು ಮರಳಿ ತನ್ನಲ್ಲಿಗೆ ಕರೆಸಿಕೊಂಡಿದೆ ಎಂದು ವರದಿಯಾಗಿದೆ.ಈ ಬಗ್ಗೆ ಮಾತನಾಡಿರುವ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು, ‘2019ರಲ್ಲಿ ಭಾರತ ಬಾಲಾಕೋಟ್‌ನಲ್ಲಿದ್ದ ಉಗ್ರರ ಕ್ಯಾಂಪ್‌ಗಳ ಮೇಲೆ ವಾಯುದಾಳಿ ನಡೆಸಿ ನೀಡಿದ್ದ ಪೆಟ್ಟಿನಿಂದ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಇದೀಗ ಪಹಲ್ಗಾಂ ದಾಳಿಯ ವಿರುದ್ಧ ಅಂತಾರಾಷ್ಟ್ರೀಯವಾಗಿ ಭುಗಿಲೆದ್ದಿರುವ ಆಕ್ರೋಶ ಕಂಡು ಹಾಗೂ ಭಾರತದ ದಾಳಿ ಸಾಧ್ಯತೆಯಿಂದ ಬೆದರಿ ಆಕ್ರಮಿತ ಕಾಶ್ಮೀರದ ಒಳ ಪ್ರದೇಶಗಳಿಗೆ ಅಥವಾ ಪಾಕಿಸ್ತಾನಕ್ಕೆ ಕಾಲ್ಕಿತ್ತಿದ್ದಾರೆ’ ಎಂದು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಸಮೀಪವೇ ಇರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಶಕರಗಢ, ಸಮಹ್ನಿ, ಸುಖ್ಮಲ್ ಲಾಂಚ್‌ಪ್ಯಾಡ್‌ಗಳಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್ ಹಾಗೂ ಅದರ ಉಪಸಂಸ್ಥೆಗಳಿಗೆ ಸೇರಿದ 10-12 ಉಗ್ರರು ಅಡಗಿ ಕುಳಿತಿದ್ದರು. ಇವರು ಜಮ್ಮು ಕಾಶ್ಮೀರದೊಳಗೆ ನುಸುಳಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದು, ಕಾಶ್ಮೀರದೊಳಗೆ ನುಸುಳುವ ಆದೇಶಕ್ಕಾಗಿ ಕಾದಿದ್ದರು. ಆದರೆ ಇದೀಗ ಜಾಗ ಖಾಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತೆಯೇ, ಉಗ್ರರಿಗೆ ನೆರವಾಗಲು ಲಾಂಚ್‌ಪ್ಯಾಡ್‌ಗಳ ಬಳಿ ಇರುತ್ತಿದ್ದ ಪಾಕ್ ಸೈನಿಕರೂ ಸಹ ಪಿಒಕೆಯಿಂದ ಪಲಾಯನಗೈದಿದ್ದಾರೆ ಎಂದು ವರದಿಯಾಗಿದೆ.