ಸಾರಾಂಶ
ಪಾಕ್‌ನ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಸ್ಲಾಮಾಬಾದ್: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರದಾಳಿಯ ಹಿಂದೆ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಕೈವಾಡವಿರುವುದು ಖಚಿತವಾಗುವಂತಹ ಬೆಳವಣಿಗೆಗಳ ನಡುವೆಯೇ, ಪಾಕ್‌ನ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಒಂದು ಕಡೆ ಪಹಲ್ಗಾಂ ದಾಳಿ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಆರಂಭಿಸಿದ್ದರೆ, ಅತ್ತ ಪಾಕಿಸ್ತಾನದಲ್ಲೇ ಮುನೀರ್ ವಿರುದ್ಧ ಅಲ್ಲಿನ ಜನ ತಿರುಗಿಬಿದ್ದಿದ್ದಾರೆ ಹಾಗೂ ಅವರ ರಾಜೀನಾಮೆಗೂ ಆಗ್ರಹಿಸುತ್ತಿದ್ದಾರೆ. ಏತನ್ಮಧ್ಯೆ ಅವರು ನಾಪತ್ತೆಯಾಗಿದ್ದು, ರಾವಲ್ಪಿಂಡಿಯ ಬಂಕರ್‌ನಲ್ಲಿ ಅಡಗಿ ಕುಳಿತಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಮತ್ತೊಂದೆಡೆ ಅವರ ಪರಿವಾರ ದೇಶ ತೊರೆದಿದೆ ಎಂದೂ ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ, ‘ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ. ಅದನ್ನು ನಾವು ಎಂದೂ ಮರೆಯುವುದಿಲ್ಲ. ನಾವು ಹಿಂದೂಗಳಿಗಿಂತ ಎಲ್ಲಾ ವಿಧದಲ್ಲೂ ಭಿನ್ನರು. ಆದ್ದರಿಂದಲೇ ದೇಶ ವಿಭಜನೆಯಾಗಿದ್ದು’ ಎಂದು ಮುನೀರ್ ಹೇಳಿದ್ದರು. ಅವರ ಈ ಭಾಷಣವೇ ಉಗ್ರರಿಗೆ ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡಲು ಪ್ರಚೋದನೆ ನೀಡಿತ್ತು ಎಂಬ ವಿಶ್ಲೇಷಣೆಗಳೂ ಇವೆ.