ಸಾರಾಂಶ
ಪಹಲ್ಗಾಂ ನರಮೇಧದ ವಿಷಯದಲ್ಲಿ ಜಾಗತಿಕವಾಗಿ ಒಬ್ಬಂಟಿಯಾಗಿರುವ ಪಾಕಿಸ್ತಾನ ಇದೀಗ ಮುಖ ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ.
ಇಸ್ಲಾಮಾಬಾದ್: ಪಹಲ್ಗಾಂ ನರಮೇಧದ ವಿಷಯದಲ್ಲಿ ಜಾಗತಿಕವಾಗಿ ಒಬ್ಬಂಟಿಯಾಗಿರುವ ಪಾಕಿಸ್ತಾನ ಇದೀಗ ಮುಖ ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಭಾರತದ ಸೇನಾ ಕಾರ್ಯಾಚರಣೆಯ ಬೆದರಿಕೆಯಿಂದ ಪತರುಗಟ್ಟಿರುವ ಪಾಕಿಸ್ತಾನವು, ಪಹಲ್ಗಾಂ ದಾಳಿ ಕುರಿತು ಯಾವುದೇ ‘ತಟಸ್ಥ ಮತ್ತು ಪಾರದರ್ಶಕ ತನಿಖೆ’ಗೆ ಸಿದ್ಧ ಎಂದು ಹೇಳಿ ಹೊಸ ನಾಟಕ ಶುರುಮಾಡಿದೆ.
ಪಹಲ್ಗಾಂ ದಾಳಿಯ ಬಳಿಕ ಒಮ್ಮೆಯೂ ಈ ಕುರಿತು ಮಾತನಾಡದೇ ಇದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ‘ಪಹಲ್ಗಾಂ ಘಟನೆಯು ನಮ್ಮ ವಿರುದ್ಧ ಭಾರತ ನಿರಂತರವಾಗಿ ಮಾಡಿಕೊಂಡು ಬಂದಿರುವ ದೂಷಣೆಗೆ ಮತ್ತೊಂದು ಉದಾಹರಣೆಯಾಗಿದೆ. ಇದಕ್ಕೆಲ್ಲ ಅಂತ್ಯ ಹಾಕಬೇಕು. ಹೀಗಾಗಿ ಜವಾಬ್ದಾರಿಯುತ ದೇಶವಾಗಿ ಪಾಕಿಸ್ತಾನವು ಈ ದಾಳಿ ಕುರಿತ ಯಾವುದೇ ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಗೆ ಸಿದ್ಧ’ ಎಂದು ಘೋಷಿಸಿದ್ದಾರೆ.
ಖೈಬರ್-ಪಖ್ತೂನ್‌ಖ್ವಾದ ಕಾಕುಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೆಹಬಾಜ್, ‘ಯಾವತ್ತಿದ್ದರೂ ಶಾಂತಿಯೇ ನಮ್ಮ ಆದ್ಯತೆ. ಹಾಗಂತ ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ನಾವು ದೇಶದ ಘನತೆ ಮತ್ತು ಭದ್ರತೆ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಯಾವುದೇ ವಿಶ್ವಾಸಾರ್ಹ ತನಿಖೆ ಅಥವಾ ಬಲವಾದ ಸಾಕ್ಷ್ಯಗಳಿಲ್ಲದೆ ಭಾರತವು ಆಧಾರರಹಿತ ಹಾಗೂ ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಮೊಹಮ್ಮದ್ ಆಲಿ ಜಿನ್ನಾ ಅವರು ಕಾಶ್ಮೀರವನ್ನು ಪಾಕಿಸ್ತಾನದ ಕಂಠನಾಳ ಎಂದಿದ್ದಾರೆ. ವಿಶ್ವಸಂಸ್ಥೆಯ ನಿರ್ಣಯದ ಹೊರತಾಗಿಯೂ ಈ ವಿವಾದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.
ಭಾರತದ ವಿರುದ್ಧ ಕಿಡಿ:
ಇದೇ ವೇಳೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದುಗೊಳಿಸುವ ಭಾರತದ ಕ್ರಮ ಖಂಡಿಸಿದ ಅವರು, ನೀರು ನಿಲ್ಲಿಸುವ, ಹರಿವು ಕಡಿಮೆ ಮಾಡುವ ಅಥವಾ ನೀರಿನ ಮಾರ್ಗ ಬದಲಿಸುವಂತಹ ಯಾವುದೇ ಕ್ರಮಗಳ ವಿರುದ್ಧ ನಾವು ಪೂರ್ಣ ಶಕ್ತಿ ಮತ್ತು ಸಾಮರ್ಥ್ಯದಿಂದ ಉತ್ತರ ನೀಡಲಿದ್ದೇವೆ. ತನ್ನ ಪಾಲಿನ ನೀರು ಪಡೆಯಲು ಪಾಕಿಸ್ತಾನವು ಸರ್ವ ಪ್ರಯತ್ನ ನಡೆಸಲಿದೆ ಎಂದರು.