ಸಾರಾಂಶ
ಕಾಶ್ಮೀರದಲ್ಲಿ 26 ಜನರ ಸಾವಿಗೆ ಕಾರಣವಾದ ಪಹಲ್ಗಾಂ ನರಮೇಧದ ನಂತರ ಭಾರತದಿಂದ ದಾಳಿ ಭೀತಿ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಅದನ್ನು ಬಹಿರಂಗವಾಗೇ ಹೇಳಿಕೊಳ್ಳುತ್ತಿದೆ.
ಇಸ್ಲಾಮಾಬಾದ್: ಕಾಶ್ಮೀರದಲ್ಲಿ 26 ಜನರ ಸಾವಿಗೆ ಕಾರಣವಾದ ಪಹಲ್ಗಾಂ ನರಮೇಧದ ನಂತರ ಭಾರತದಿಂದ ದಾಳಿ ಭೀತಿ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಅದನ್ನು ಬಹಿರಂಗವಾಗೇ ಹೇಳಿಕೊಳ್ಳುತ್ತಿದೆ.
‘ಮುಂದಿನ 24ರಿಂದ 26 ಗಂಟೆಗಳಲ್ಲಿ ತನ್ನ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಭಾರತ ಸರ್ವ ಸಿದ್ಧತೆ ನಡೆಸುತ್ತಿದೆ’ ಎಂದು ಪಾಕಿಸ್ತಾನ ಆತಂಕದಿಂದಲೇ ಆರೋಪಿಸಿದೆ. ಜತೆಗೆ, ಒಂದು ವೇಳೆ ಭಾರತ ಈ ರೀತಿಯೇನಾದರೂ ಮಾಡಿದರೆ ಸೂಕ್ತ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆ ಮಾತುಗಳನ್ನಾಡಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ನಿವಾಸದಲ್ಲಿ ಭದ್ರತೆಗೆ ಸಂಬಂಧಿಸಿದ ಸಭೆ ನಡೆಸಿ ಪಹಲ್ಗಾಂ ದಾಳಿಕೋರರ ವಿರುದ್ಧ ಪ್ರತೀಕಾರ ಕೈಗೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಬೆನ್ನಲ್ಲೇ ಪಾಕ್ ಇಂಥದ್ದೊಂದು ಹೇಳಿಕೆ ನೀಡಿದೆ. ವಿಶೇಷವೆಂದರೆ ಮೋದಿ ಸಭೆ ಬಳಿಕ ಕಂಗೆಟ್ಟಂತೆ ಕಂಡು ಬಂದಿದ್ದ ಪಾಕಿಸ್ತಾನದ ಮಾಹಿತಿ ಸಚಿವ ಅತಾಹುಲ್ಲಾ ತರಾರ್ ಅವರು. ಮಂಗಳವಾರ ತಡರಾತ್ರಿ 2 ಗಂಟೆಗೆ ಟೀವಿ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಆತಂಕ ತೋರ್ಪಡಿಸಿದ್ದಾರೆ.
‘ಭಾರತವು ಆಧಾರರಹಿತ ಮತ್ತು ಸಿನಿಕತನದ ಆರೋಪದ ಮೇರೆಗೆ ಪಾಕಿಸ್ತಾನದ ಮೇಲೆ ದಾಳಿಗೆ ಮುಂದಾಗಿದೆ. ಹಾಗೆ ನೋಡಿದರೆ ಪಾಕಿಸ್ತಾನವೇ ಭಯೋತ್ಪಾದನೆಯ ಬಲಿಪಶು ಆಗಿದೆ. ಪಹಲ್ಗಾಂ ದಾಳಿ ಕುರಿತು ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆಗೆ ನಾವು ಸಿದ್ಧ ಎಂದು ಹೇಳಿದ್ದೇವೆ. ಆದರೂ ಭಾರತ ತನಿಖೆಯ ಬದಲು ನಮ್ಮ ಜತೆಗೆ ಸಂಘರ್ಷದ ಹಾದಿ ಹಿಡಿದಿದೆ’ ಎಂದು ತರಾರ್ ಆರೋಪಿಸಿದ್ದಾರೆ.
ಆದರೆ ಬಿದ್ದರೂ ಮೀಸೆ ಮಣ್ಣಾಗದಂತೆ ಇನ್ನೊಂದು ಹೇಳಿಕೆ ನೀಡಿರುವ ಅತಾಹುಲ್ಲಾ ತರಾರ್ ಅವರು, ‘ಭಾರತದ ಯಾವುದೇ ಸೇನಾ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡಲಾಗುವುದು. ಯುದ್ಧದಿಂದಾಗುವ ಪರಿಣಾಮಕ್ಕೆ ಭಾರತವೇ ಹೊಣೆಯಾಗಬೇಕಾಗುತ್ತದೆ’ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಸಿದ್ದಾರೆ.