ಸಾರಾಂಶ
ಝೇಲಂ ನದಿಯಿಂದ ಹಠಾತ್ತನೆ ನೀರನ್ನು ಹರಿಬಿಟ್ಟ ಭಾರತದ ಕ್ರಮದಿಂದ ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣ
ನವದೆಹಲಿ: ಸಿಂಧೂ ಜಲ ಒಪ್ಪಂದದಿಂದ ಹೊರಬಂದು ಪಾಕಿಸ್ತಾನಕ್ಕೆ ನೀರು ಕೊಡೆವು ಎನ್ನುತ್ತಲೇ, ಝೇಲಂ ನದಿಯಿಂದ ಹಠಾತ್ತನೆ ನೀರನ್ನು ಹರಿಬಿಟ್ಟ ಭಾರತದ ಕ್ರಮದಿಂದ ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಬಗ್ಗೆ ಪಿಒಕೆಯ ರಾಜಧಾನಿ ಮುಜಾಫರಾಬಾದ್ ಹಾಗೂ ಛಕೋತಿಯಲ್ಲಿ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಿದ ಸ್ಥಳೀಯ ಅಧಿಕಾರಿಗಳು, ಝೇಲಂ ತಟದಲ್ಲಿರುವ ಜನರಿಗೆ ಆದಷ್ಟು ಬೇಗ ಜಾಗ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಅಂತೆಯೇ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಜನರಿಗೆ ನೆಲೆಸಲು ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲಾಗುತ್ತಿದೆ. ನದಿದಂಡೆಯಲ್ಲಿ ಮೀನು ಹಿಡಿಯುವುದು, ಜಾನುವಾರುಗಳನ್ನು ಮೇಯಿಸುವುದನ್ನು ನಿರ್ಬಂಧಿಸಲಾಗಿದೆ.ಸಿಂಧೂ ಜಲ ಒಪ್ಪಂದ ರದ್ದಾದ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಸಿಂಧೂ ಉಪನದಿಗಳ ಬಗ್ಗೆ ಮಾಹಿತಿ ಕೊಡುವ ಅಗತ್ಯವಿಲ್ಲ. ಹಾಗಾಗಿ ಭಾರತ ಮೊದಲೇ ಎಚ್ಚರಿಸದೇ ಪಾಕಿಸ್ತಾನದಲ್ಲಿ ಹರಿಯುವ ಝೇಲಂ ನದಿಗೆ ಅಧಿಕ ನೀರನ್ನು ಇದ್ದಕ್ಕಿದ್ದಂತೆ ಹರಿಸಿತ್ತು.