ಗುಪ್ತಚರ ಮೂಲಗಳಿಂದ ಭಾರೀ ದಾಳಿ ಎಚ್ಚರಿಕೆ

ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟ ಮುನೀರ್‌ ಯೋಜನೆ

ನವದೆಹಲಿ: ಅಮೆರಿಕ-ಇರಾನ್‌ ನಡುವೆ ಸಂಧಾನ ಯತ್ನ ವಿಫಲವಾಗಿದ್ದರಿಂದ ಹತಾಶನಾಗಿರುವ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ತನ್ನ ಇಮೇಜ್‌ ಹೆಚ್ಚಿಸಿಕೊಳ್ಳುವ ಯೋಜನೆಯ ಭಾಗವಾಗಿ ಕಾಶ್ಮೀರದಲ್ಲಿ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದಾನೆ. ಪಾಕ್‌ನ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಈತ ಉಗ್ರಜಾಲಕ್ಕೆ ಮತ್ತೆ ಉತ್ತೇಜನ ನೀಡಲು ಉದ್ದೇಶಿಸಿದ್ದಾನೆ ಎಂದು ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ.

ಈಗಾಗಲೇ ಅಮೆರಿಕ-ಇರಾನ್‌ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುತ್ತಿರುವ ಪಾಕ್‌, ಸಾಫಲ್ಯ ಕಾಣದೆ ಕಂಗೆಟ್ಟಿದೆ. ಹಾಗಾಗಿ ಕಾಶ್ಮೀರ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದು, ಅಮೆರಿಕದ ಗಮನ ಸೆಳೆಯಲು ಯತ್ನಿಸುತ್ತಿದೆ. ಈ ಮೂಲಕ ಅಮೆರಿಕ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವುದು ಮುನೀರ್‌ ಲೆಕ್ಕಾಚಾರ ಎನ್ನಲಾಗಿದೆ.

ಇದಕ್ಕಾಗಿ ಪಾಕ್‌ 2 ರೀತಿಯ ಯೋಜನೆ ಸಿದ್ಧಪಡಿಸಿದೆ. ಒಂದು, ಸ್ಥಳೀಯ ಭಯೋತ್ಪಾದಕ ಜಾಲವನ್ನು ಸಕ್ರಿಯಗೊಳಿಸಿ, ಭಾರತದ ಪ್ರವಾಸೋದ್ಯಮ ನೆಲಕಚ್ಚಿಸುವುದು ಹಾಗೂ ಭದ್ರತಾ ಪಡೆಗಳು ಚದುರುವಂತೆ ಮಾಡುವುದು. 2ನೆಯದು, ಪಾಕಿಸ್ತಾನಿ ಉಗ್ರರನ್ನು ಬಳಸಿ ಗಡಿಯಾಚೆಯಿಂದ ದಾಳಿ ನಡೆಸುವುದು.


ಅಧ್ಯಕ್ಷ ಗಾದಿ ಮೇಲೆ ಮುನೀರ್‌ ಕಣ್ಣು:

ಆಸೀಂ ಮುನೀರ್‌ಗೆ ಇದು ವೈಯಕ್ತಿಕ ಮತ್ತು ರಾಜಕೀಯ ಪ್ರತಿಷ್ಠೆಯ ವಿಷಯವಾಗಿದೆ. ಇತ್ತೀಚೆಗೆ ಅವರು ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕಾಗಿ ಶ್ರಮಿಸಿದ್ದರು, ಆದರೆ ಅದು ವಿಫಲವಾಗಿದೆ. ಇದರಿಂದ ಅವರ ‘ಜಾಗತಿಕ ರಾಜನೀತಿಜ್ಞ’ ಇಮೇಜ್‌ಗೆ ಧಕ್ಕೆ ಬಂದಿದೆ. ಈ ನಡುವೆ ಅವರು ಅಧ್ಯಕ್ಷ ಸ್ಥಾನಕ್ಕೆ ಕಣ್ಣು ಹಾಕಿದ್ದಾರೆ. ಹಾಗಾಗಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯಗೊಳಿಸುವ ಮೂಲಕ ತಮ್ಮ ಇಮೇಜ್‌ ಅನ್ನು ಭದ್ರಪಡಿಸಿಕೊಳ್ಳಲು ಮತ್ತು ಅಧ್ಯಕ್ಷ ಪಟ್ಟವೇರಲು ಹಾದಿ ಸುಗಮಗೊಳಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.