ಸಾರಾಂಶ
ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಲ್ಯಾಂಚ್ ಪ್ಯಾಡ್, ತರಬೇತಿ ಶಿಬಿರಗಳ ಪುನರ್ ನಿರ್ಮಾಣಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.
ಇಸ್ಲಾಮಾಬಾದ್: ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಲ್ಯಾಂಚ್ ಪ್ಯಾಡ್, ತರಬೇತಿ ಶಿಬಿರಗಳ ಪುನರ್ ನಿರ್ಮಾಣಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.
ಮೂಲಗಳ ಅನ್ವಯ, ಪಾಕ್‌ನ ಉಗ್ರ ಸಂಘಟನೆಗಳು, ಪಾಕ್ ಸರ್ಕಾರ, ಸೇನೆ, ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸೇರಿಕೊಂಡು ಗಡಿ ನಿಯಂತ್ರಣ ರೇಖೆಯ ಬಳಿಯ ದಟ್ಟ ಕಾಡಿನಲ್ಲಿ ಹೈಟೆಕ್ ಸಣ್ಣ ಉಗ್ರ ಶಿಬಿರಗಳ ನಿರ್ಮಾಣಕ್ಕೆ ಮುಂದಾಗಿವೆ. ದೊಡ್ಡ ಶಿಬಿರ ಸ್ಥಾಪಿಸಿದರೆ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಸಣ್ಣ ಸಣ್ಣ ಶಿಬಿರ ಸ್ಥಾಪಿಸುವುದು. ಈ ಆ ಮೂಲಕ ಈ ತಂತ್ರದ ಮೂಲಕ ಭಾರತದ ಕಣ್ಗಾವಲು ಮತ್ತು ವಾಯುದಾಳಿಗಳನ್ನು ತಪ್ಪಿಸಿಕೊಳ್ಳುವ ಗುರಿ ಹೊಂದಿದೆ. ಈ ಶಿಬಿರಗಳು 200 ಕ್ಕಿಂತ ಕಡಿಮೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ ಎನ್ನಲಾಗಿದೆ.
ಹೊಸ ಶಿಬಿರಗಳು ರಾಡಾರ್ ಮತ್ತು ಉಪಗ್ರಹದ ಕಣ್ಗಾವಲು ಎದುರಿಸುವ ತಂತ್ರಜ್ಞಾನ ಹೊಂದಿರಲಿವೆ. ಇಂಥ ಒಟ್ಟು 3 ಲಾಂಚ್ ಪ್ಯಾಡ್‌ಗಳ ಪುನಾರಭಿವೃದ್ಧಿಗೆ ಪಾಕ್ ಮುಂದಾಗಿದೆ.
ಗಡಿ ಮೇಲೂ ಕಣ್ಣು: ಪಿಒಕೆ ಜೊತೆಗೆ ಭಾರತದ ದಾಳಿಗೆ ನಾಶವಾಗಿದ್ದ ಅಂತಾರಾಷ್ಟ್ರೀಯ ಗಡಿಯ ಲಾಂಚ್‌ಪ್ಯಾಡ್‌ಗಳ ಅಭಿವೃದ್ಧಿಗೂ ಪಾಕ್ ಮುಂದಾಗಿದೆ. ಆರ್ಥಿಕವಾಗಿ ಬರ್ಬಾದ್ ಆಗಿರುವ ಪಾಕಿಸ್ತಾನ ತನ್ನ ದೇಶದಲ್ಲಿನ ಉಗ್ರರನ್ನು ಸಲಹುವುದಕ್ಕೆ ಇತ್ತೀಚೆಗಷ್ಟೇ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೀಡಿದ್ದ ಹಣಕಾಸು ನೆರವಿನ ಪೈಕಿ ಒಂದು ಭಾಗವನ್ನು ಮೀಸಲಿಡುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.