ಸಾರಾಂಶ
ನವದೆಹಲಿ: ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆಗಳು ಮತ್ತು ಪಾಕಿಸ್ತಾನದ ಸೇನಾ ನೆಲೆಗಳ ಅತ್ಯಂತ ನಿಖರವಾಗಿ ದಾಳಿ ನಡೆಸಿದ ಭಾರತೀಯ ಸೇನಾಪಡೆಯ ಸಾಹಸದ ಹಿಂದೆ, ಸ್ವದೇಶಿ ‘ನಾವಿಕ್’ ದಿಕ್ಸೂಚಿ ವ್ಯವಸ್ಥೆಯು ಬೆನ್ನೆಲುಬಾಗಿ ನಿಂತಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ವಿಶ್ವದ ಬಹುತೇಕ ದೇಶಗಳು ತಮ್ಮ ಶತ್ರು ದೇಶಗಳ ಮೇಲೆ ದಾಳಿಗೆ ಅಮೆರಿಕದ ಜಿಪಿಎಸ್ ವ್ಯವಸ್ಥೆ ಬಳಸಿದರೆ, ಭಾರತೀಯ ಸೇನಾಪಡೆಯು, ಇಸ್ರೋ ಅಭಿವೃದ್ಧಿಪಡಿಸಿರುವ ನಾವಿಕ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಅಮೆರಿಕಕ್ಕೂ ಸಾಧ್ಯವಾಗದ ಅತ್ಯಂತ ನಿಖರ ದಾಳಿಯನ್ನು ಭಾರತ ಸಾಧಿಸಿದೆ. ಕೇವಲ 1 ಮೀಟರ್ ಜಾಗವನ್ನೇ ಆಯ್ದುಕೊಂಡು ಆ ಪ್ರದೇಶ ಮೇಲೆ ನೂರಾರು ಕಿ.ಮೀ ದೂರದಿಂದಲೇ ದಾಳಿ ನಡೆಸುವ ಸಾಮರ್ಥ್ಯವು ಭಾರತವನ್ನು ಸಿದ್ಧಿಸಿಕೊಂಡಿದೆ. ರಾವಲ್ಪಿಂಡಿಯ ಪಾಕಿಸ್ತಾನ ಸೇನೆ ಕಮಾಂಡ್ ಸೆಂಟರ್‌ನ ಕೇಂದ್ರ ಭಾಗದ ಮೇಲೆ ಅತ್ಯಂತ ನಿಖರವಾಗಿ ದಾಳಿ ನಡೆಸಿದ್ದು ಉದಾಹರಣೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಸೇಡಿಗೆ ನಾವಿಕ್:
ಈ ಮೊದಲು ಭಾರತ ಅಮೆರಿಕದ ಜಿಪಿಎಸ್ ಅನ್ನು ಅವಲಂಬಿಸಿತ್ತು. ಆದರೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆ, ಭಾರತೀಯ ಸೇನೆಗೆ ಜಿಪಿಎಸ್ ಮಾಹಿತಿ ನೀಡಲು ಅಮೆರಿಕ ನಿರಾಕರಿಸಿಬಿಟ್ಟಿತ್ತು. ಇದರಿಂದಾಗಿ ಶತ್ರುದೇಶದಲ್ಲಿ ಗುರಿಗಳನ್ನು ಗುರುತಿಸಲು ಭಾರತಕ್ಕೆ ಕಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ 2013ರಲ್ಲಿ ಭಾರತ ಸ್ವದೇಶಿ ನಾವಿಕ್ ದಿಕ್ಸೂಚಿ ವ್ಯವಸ್ಥೆ ಅಭಿವೃದ್ಧಿಪಡಿಸಿತ್ತು. ಅದಕ್ಕೆ ಪೂರಕವಾಗಿ ಭಾರತ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿನ ಅಷ್ಟೂ ಪ್ರದೇಶಗಳ ಭೂಮಿ, ವಾಯು ಮತ್ತು ಜಲ ಪ್ರದೇಶದ ಇಂಚಿಂಚೂ ಮಾಹಿತಿಯಿರುವ ನಕ್ಷೆ ತಯಾರಿಸಲಾಯಿತು. ಪರಿಣಾಮ ಈ ವಲಯದಲ್ಲಿನ ಯಾವುದೇ ಪ್ರದೇಶಗಳ ಮೇಲೆ ಅತ್ಯಂತ ನಿಖರ ದಾಳಿಯ ಕ್ಷಮತೆಗೆ ಭಾರತಕ್ಕೆ ಒಲಿದಿದೆ.
ಈ ನಾವಿಕ್ ಬಳಸಿಕೊಂಡೇ ಭಾರತದ ಬ್ರಹ್ಮೋಸ್ ಕ್ಷಿಪಣಿ ಮತ್ತು ಇತರೆ ಡ್ರೋನ್‌ಗಳನ್ನು ಪಾಕಿಸ್ತಾನದ ಉಗ್ರ ನೆಲೆಗಳು, ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಪರಿಣಾಮ ನಿರ್ದಿಷ್ಟ ಜಾಗದ ಹೊರತಾಗಿ ಬೇರಾವ ಪ್ರದೇಶಗಳಿಗೂ ಹಾನಿಯಾಗದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಪಾಕಿಸ್ತಾನ ಹಾರಿಸಿದ ಕ್ಷಿಪಣಿ, ಡ್ರೋನ್ ತಡೆಯಲು ಇರುವ ದೇಶೀಯ ವಾಯುರಕ್ಷಣಾ ವ್ಯವಸ್ಥೆಯಲ್ಲೂ ಸ್ವದೇಶಿ ನಾವಿಕ್ ಬಳಸಿ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮೇ।ಜ। ರಾಜೀವ್ ನಾರಾಯಣ್ ಅವರು, ‘5 ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ ಗೆಲುವು, ವಿಕಸಿತ ಭಾರತದ ಕಡೆಗಿನ ದೇಶದ ಕೆಲಸಕ್ಕೆ ಬಲ ತುಂಬಲಿದೆ. ಈ ಬಾರಿ ಭಾರತ ಕೇವಲ ಅನ್ಯ ರಾಷ್ಟ್ರಗಳಿಂದ ಪಡೆದ ಶಸ್ತ್ರಾಸ್ತ್ರಗಳನ್ನು ಅವಲಂಬಿಸದೆ, ಸ್ವದೇಶಿ ಅಸ್ತ್ರಗಳನ್ನೂ ಬಳಸುತ್ತಿದೆ. ಇದಕ್ಕೆ ಎಐ ಮತ್ತಷ್ಟು ಬಲ ತುಂಬಿದೆ’ ಎಂದು ಹೇಳಿದ್ದಾರೆ.
ಭಾರತದ ಅತ್ಯಂತ ನಿಖರ ದಾಳಿ ಸಮರ ತಂತ್ರಜ್ಞಾನ ಜಗತ್ತಿನ ಎದುರು ಅನಾವರಣ!
ಪಾಕಿಸ್ತಾನದ ಭಯೋತ್ಪಾದನೆಯ ಕೇಂದ್ರ ಸ್ಥಾನಗಳು ಹಾಗೂ ವಾಯುಸೇನಾ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಭಾರತ ಪ್ರತೀಕಾರವನ್ನೇನೋ ತೀರಿಸಿಕೊಂಡಿದೆ. ಆದರೆ ಈ ಸಮರದಲ್ಲಿ ಅಮೆರಿಕ, ಇಸ್ರೇಲ್‌ನಂತಹ ಕೆಲವೇ ದೇಶಗಳು ಹೊಂದಿರುವ ನಿಖರ ದಾಳಿ ಮಾಡುವ ಹಾಗೂ ಎದುರಾಳಿಗಳ ಕ್ಷಿಪಣಿ, ಡ್ರೋನ್ ಹೊಡೆದು ಹಾಕುವ ಯುದ್ಧ ತಂತ್ರಜ್ಞಾನವನ್ನು ಭಾರತ ಸಿದ್ಧಿಸಿಕೊಂಡಿದೆ ಮತ್ತು ಭಾರತದ ದೇಶಿ ಕ್ಷಿಪಣಿಗಳು ಭರ್ಜರಿ ಹೊಡೆತ ಕೊಟ್ಟಿವೆ ಎಂಬ ಸ್ಪಷ್ಟ ಸಂದೇಶ ವಿಶ್ವಕ್ಕೇ ಪಸರಿಸಿದೆ.
1. ಪಾಕಿಸ್ತಾನದ ಉಗ್ರಗಾಮಿ ನೆಲೆಗಳನ್ನು ಅತ್ಯಂತ ನಿಖರ (ಪ್ರಿಸಿಷನ್) ದಾಳಿ ಮೂಲಕ ಭಾರತ ಹೊಡೆದು ಹಾಕಿದೆ. ತಾನು ಎಲ್ಲಿ ದಾಳಿ ಮಾಡಬೇಕಿತ್ತೋ ಅಲ್ಲೇ ದಾಳಿ ಮಾಡಿದೆ. ಗೊತ್ತು ಗುರಿ ಇಲ್ಲದೆ ಬಾಂಬ್‌ಗಳ ಸುರಿಮಳೆಗೈದಿಲ್ಲ. ಎಲ್ಲ ದೇಶಗಳ ಬಳಿಯೂ ಇಂತಹ ತಂತ್ರಜ್ಞಾನ ಇಲ್ಲ. ಭಾರತದ ಬಳಿ ಇದೆ ಎಂದು ಬಹುತೇಕರಿಗೆ ಗೊತ್ತೇ ಇರಲಿಲ್ಲ!
2. ಈ ನಿಖರತೆ ಪಾಕಿಸ್ತಾನದ ಏರ್‌ಬೇಸ್‌ಗಳ ಮೇಲಿನ ದಾಳಿ ಗಮನಿಸಿದರೆ ತಿಳಿಯುತ್ತದೆ. ವಾಯುನೆಲೆಗಳ ರನ್‌ವೇಯ ಮೂರನೇ ಒಂದು ಭಾಗವನ್ನು ನಿಖರವಾಗಿ ಗುರುತಿಸಿ ದಾಳಿ ಮಾಡಿದರೆ ಅಲ್ಲಿ ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ದಾಳಿಯನ್ನು ಭಾರತ ಮಾಡಿ ತೋರಿಸಿದೆ. ಎಲ್ಲೋ ಒಂದು ಕಡೆ ಬಾಂಬ್ ಹಾಕಿದ್ದರೆ ವಿಮಾನ ಇಳಿಸಲು, ಹಾರಿಸಲು ಪಾಕ್‌ಗೆ ಸಮಸ್ಯೆಯೇ ಆಗುತ್ತಿರಲಿಲ್ಲ.
3. ಹಮಾಸ್ ಉಗ್ರರು ರಾಕೆಟ್, ಕ್ಷಿಪಣಿ ದಾಳಿ ನಡೆಸಿದಾಗ ಎಲ್ಲವನ್ನೂ ಹೊಡೆದು ಹಾಕಿ ಇಡೀ ವಿಶ್ವವನ್ನೇ ಇಸ್ರೇಲ್ ಚಕಿತಗೊಳಿಸಿತ್ತು. ಆದರೆ ಈಗ ಇಸ್ರೇಲ್‌ಗಿಂತ ಅತ್ಯಂತ ಕರಾರುವಾಕ್ಕಾದ ವಾಯು ರಕ್ಷಣಾ ವ್ಯವಸ್ಥೆ ಭಾರತದ ಬಳಿ ಇದೆ. ಪಾಕಿಸ್ತಾನ 700 ಡ್ರೋನ್, ಕ್ಷಿಪಣಿ ಹಾರಿಸಿದರೂ ಒಂದರಿಂದಲೂ ಭಾರತಕ್ಕೆ ಘೋರ ಹಾನಿಯಾಗಿಯೇ ಇಲ್ಲ ಎಂಬುದು ಇದನ್ನು ನಿರೂಪಿಸುತ್ತದೆ.
4. ಭಾರತದ ಬಳಿ ಇರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಅಸ್ತ್ರ ಪಾಕಿಸ್ತಾನದ ನೆಲೆಗಳಿಗೆ ನುಗ್ಗಿ ಹೊಡೆದಿದೆ. ಒಮ್ಮೆ ಉಡಾವಣೆಯಾದರೆ ಇದನ್ನು ಪಾಕಿಸ್ತಾನ ಬಿಡಿ, ವಿಶ್ವದ ಯಾವ ದೇಶವೂ ತಡೆಯಲು ಆಗದು.
ಏನಿದು ನಾವಿಕ್?
- ಸ್ಥಳ ಪತ್ತೆಗೆ ಇರುವ ಅಮೆರಿಕದ ಜಿಪಿಎಸ್ ಮಾದರಿಯ ಸ್ವದೇಶಿ ದಿಕ್ಸೂಚಿ ತಂತ್ರಜ್ಞಾನವೇ ‘ನಾವಿಕ್’
- ಇಸ್ರೋ ಅಭಿವೃದ್ಧಿಪಡಿಸಿರುವ ನಾವಿಕ್ ವ್ಯವಸ್ಥೆ ಈಗ ಭಾರತದ ಸೇನೆಯಿಂದ ಯಶಸ್ವಿಯಾಗಿ ಬಳಕೆ
- ವೈರಿ ಇರುವ ಕೇವಲ 1 ಮೀ. ಜಾಗವನ್ನೇ ಆಯ್ದುಕೊಂಡು ಆ ಪ್ರದೇಶ ಮೇಲೆ ದಾಳಿ ನಡೆಸುವ ಕ್ಷಮತೆ
- ನೂರಾರು ಕಿ.ಮೀ ದೂರದಿಂದಲೇ ಕ್ಷಿಪಣಿಗೆ ‘ನಾವಿಕ್’ ಮೂಲಕ ದಿಕ್ಕು ತೋರಿಸಿ ದಾಳಿ ಮಾಡಬಹುದು
- ರಾವಲ್ಪಿಂಡಿಯಲ್ಲಿನ ಪಾಕ್ ಸೇನಾ ನೆಲೆ ಕೇಂದ್ರ ಭಾಗದ ಮೇಲಷ್ಟೇ ದಾಳಿ ನಡೆಸಿದ್ದು ಇದಕ್ಕೆ ನಿದರ್ಶನ