ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರದಾಳಿ ಖಂಡಿಸಿ ಇಲ್ಲಿನ ಪಾಕಿಸ್ತಾನ ದೂತಾವಾಸದ ಮುಂದೆ ಪ್ರತಿಭಟಿಸುತ್ತಿದ್ದ 500ಕ್ಕೂ ಅಧಿಕ ಭಾರತ ಮೂಲದವರನ್ನುದ್ದೇಶಿಸಿ ಪಾಕ್‌ ಸೇನಾಧಿಕಾರಿಯೊಬ್ಬರು ಕತ್ತು ಕತ್ತರಿಸುವಂತೆ ಸನ್ನೆ ಮಾಡಿ ಉದ್ಧಟತನ ಮೆರೆದ ಘಟನೆ ಶನಿವಾರ ನಡೆದಿದೆ.

ಲಂಡನ್‌: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರದಾಳಿ ಖಂಡಿಸಿ ಇಲ್ಲಿನ ಪಾಕಿಸ್ತಾನ ದೂತಾವಾಸದ ಮುಂದೆ ಪ್ರತಿಭಟಿಸುತ್ತಿದ್ದ 500ಕ್ಕೂ ಅಧಿಕ ಭಾರತ ಮೂಲದವರನ್ನುದ್ದೇಶಿಸಿ ಪಾಕ್‌ ಸೇನಾಧಿಕಾರಿಯೊಬ್ಬರು ಕತ್ತು ಕತ್ತರಿಸುವಂತೆ ಸನ್ನೆ ಮಾಡಿ ಉದ್ಧಟತನ ಮೆರೆದ ಘಟನೆ ಶನಿವಾರ ನಡೆದಿದೆ.

ವೈರಲ್‌ ಆಗಿ ಭಾರೀ ಟೀಕೆಗೆ ಗ್ರಾಸವಾಗುತ್ತಿರುವ ವಿಡಿಯೋದಲ್ಲಿ, ಪಾಕ್‌ ದೂತಾವಾಸದ ಮೇಲೆ ನಿಂತ ಕರ್ನಲ್‌ ತೈಮೂರ್‌ ರಾಹತ್‌, ‘ಈ ಹಿಂದೆ ಪಾಕ್‌ ವಶವಾಗಿದ್ದ ಭಾರತೀಯ ವಾಯುಪಡೆಯ ಯೋಧ ಅಭಿನಂದನ್‌ ಅವರ ಫೋಟೋ ಹಿಡಿದುಕೊಂಡು ಅವರ ಕತ್ತು ಕತ್ತರಿಸುವ ರೀತಿಯಲ್ಲಿ ಸನ್ನೆ ಮಾಡಿ ಭಾರತೀಯ ಪ್ರತಿಭಟನಾಕಾರರತ್ತ ಎಚ್ಚರಿಕೆ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮಾಜಿ ದಿಜಿಪಿ ಶೇಶ್‌ ಪೌಲ್‌, ‘ಎಲ್ಲಾ ಪಾಕಿಸ್ತಾನಿಗಳು, ಜಿಯಾ ಉಲ್‌ಹಕ್‌ ಸ್ಥಾಪಿತ ಮದರಸಾಗಳಲ್ಲಿ ಪಳಗಿದ ಕುತಂತ್ರಿಗಳು. ಸೇನಾಧಿಕಾರಿ, ರಾಜತಾಂತ್ರಿಕ, ವೈದ್ಯ, ಯಾರೇ ಆಗಲಿ, ಅವರೆಲ್ಲ ಇದೇ ಮನಃಸ್ಥಿತಿಯವರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ‘ಈ ಆಕ್ರಮಣಕಾರಿ ವರ್ತನೆ ತೋರಿದವರ ವಿರುದ್ಧ ಬ್ರಿಟನ್‌ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.