ಆಪರೇಷನ್‌ ಸಿಂದೂರ ಬಳಿಕ ಪಾಕ್‌ 15 ಲಕ್ಷ ಸೈಬರ್‌ ದಾಳಿ

| Published : May 13 2025, 11:47 PM IST

ಸಾರಾಂಶ

ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಆರಂಭಿಸಿದ ಬಳಿಕ ಪಾಕಿಸ್ತಾನದ ಹ್ಯಾಕರ್‌ಗಳು, ಭಾರತವನ್ನು ಗುರಿಯಾಗಿಸಿ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಿದ್ದಾರೆ. ಆದರೆ ಇವುಗಳಲ್ಲಿ ಕೇವಲ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸೈಬರ್‌ ಅಪರಾಧ ವಿಭಾಗ ಮಾಹಿತಿ ನೀಡಿದೆ.

ಕೇವಲ 150 ದಾಳಿ ಯಶಸ್ವಿ

ಪುಣೆ: ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಆರಂಭಿಸಿದ ಬಳಿಕ ಪಾಕಿಸ್ತಾನದ ಹ್ಯಾಕರ್‌ಗಳು, ಭಾರತವನ್ನು ಗುರಿಯಾಗಿಸಿ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಿದ್ದಾರೆ. ಆದರೆ ಇವುಗಳಲ್ಲಿ ಕೇವಲ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸೈಬರ್‌ ಅಪರಾಧ ವಿಭಾಗ ಮಾಹಿತಿ ನೀಡಿದೆ.

ಭಾರತದ ಸೇನೆ, ಆಡಳಿತ, ಸರ್ಕಾರ ಸೇರಿ ಇನ್ನಿತರ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡು 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ನಡೆಸಲಾಗಿದೆ. ‘ರೋಡ್ ಆಫ್ ಸಿಂದೂರ್’ (ಸಿಂದೂರ ರಸ್ತೆ) ಹೆಸರಲ್ಲಿ ರಾಜ್ಯದ ನೋಡಲ್ ಸೈಬರ್ ಏಜೆನ್ಸಿ ಈ ಕುರಿತು ವರದಿ ಸಿದ್ಧಪಡಿಸಿ, ಎಲ್ಲಾ ಪ್ರಮುಖ ಕಾನೂನು ಜಾರಿ ಸಂಸ್ಥೆಗಳಿಗೆ ಸಲ್ಲಿಸಿದೆ.

‘ಕದನ ವಿರಾಮದ ನಂತರ ಸರ್ಕಾರಿ ವೆಬ್‌ಸೈಟ್‌ಗಳ ಮೇಲಿನ ಸೈಬರ್ ದಾಳಿಗಳು ಕಡಿಮೆಯಾಗಿವೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮೊರಾಕ್ಕೊ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಈ ದಾಳಿಗಳು ಮುಂದುವರೆದಿವೆ. ಪಾಕಿಸ್ತಾನ ಮೂಲದ ಎಪಿಟಿ 36, ಪಾಕಿಸ್ತಾನ ಸೈಬರ್​ ಫೋರ್ಸ್​, ಟೀಮ್​ ಇನ್ಸೇನ್​​ ಪಿಕೆ, ಮಿಸ್ಟೀರಿಯಸ್​​ ಬಾಂಗ್ಲಾದೇಶ, ಇಂಡೋ ಹ್ಯಾಕ್ಸ್​ ಸೆಕ್​, ಸೈಬರ್​ ಗ್ರೂಪ್​ ಎಹ್‌ಒಎಎಕ್ಸ್1337, ನ್ಯಾಷನಲ್​​ ಸೈನರ್​ ಕ್ರೂ ಹ್ಯಾಕಿಂಗ್​ ಗುಂಪುಗಳು ಒಟ್ಟಾಗಿ ಭಾರತದ ವೆಬ್​ಸೈಟ್​ಗಳನ್ನು ಗುರಿಯಾಗಿಸಿ 15 ಲಕ್ಷಕ್ಕೂ ಅಧಿಕ ದಾಳಿಗಳನ್ನು ನಡೆಸಿವೆ. 150 ಸೈಬರ್ ದಾಳಿಗಳಲ್ಲಿ ಯಶ ಕಂಡಿದ್ದಾರೆ.

ಭಾರತ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ 5,000ಕ್ಕೂ ಹೆಚ್ಚು ನಕಲಿ ಸುದ್ದಿಗಳನ್ನು ಹರಡಲಾಗಿದೆ’ ಎಂದು ಮಹಾರಾಷ್ಟ್ರ ಸೈಬರ್​ ವಿಭಾಗದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಯಶಸ್ವಿ ಯಾದವ್​ ತಿಳಿಸಿದ್ದಾರೆ.