ನವದೆಹಲಿ: ನೀಟ್ ಪರೀಕ್ಷೆ ಅಕ್ರಮ, ಪರೀಕ್ಷಾ ವ್ಯವಸ್ಥೆ ಸುಧಾರಣೆ ಮತ್ತು ನೀಟ್ ವೈಫಲ್ಯದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಪಕ್ಷ ಜು.20ರಂದು ‘ಸಂಸತ್ ಚಲೋ’ಗೆ ಕರೆ ನೀಡಿದೆ. ಇದನ್ನು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ‘ಭಾರತದ ಎರಡನೇ ಸ್ವಾತಂತ್ರ್ಯ ಚಳವಳಿ’ ಎಂದು ಕರೆದಿದ್ದಾರೆ.
ಈ ನಡುವೆ ಸೋಮವಾರದ ಸಂಸತ್ ಚಲೋಗೆ ಸಿಜೆಪಿ ಪಕ್ಷ ಇದುವರೆಗೂ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸಂಸತ್ ಭವನದತ್ತ ಪ್ರವೇಶಿಸುವ ಯಾವುದೇ ಯತ್ನವನ್ನು ತಡೆಯಲು ನಾವು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ, ಸಂಸತ್ ಅಧಿವೇಶನ ಹಾಗೂ ಸಿಜೆಪಿ ಕರೆ ನೀಡಿರುವ ಸಂಸತ್ ಚಲೋ ಹಿನ್ನೆಲೆಯಲ್ಲಿ ಸಂಸತ್ ಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಸ್ತರದ ಭದ್ರತೆ ಕೈಗೊಳ್ಳಲಾಗಿದೆ.
ಸಂಸತ್ ಚಲೋ:
ನೀಟ್ ಪರೀಕ್ಷಾ ಅಕ್ರಮ ಕುರಿತು ಸಂಸತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಸತ್ ಅಧಿವೇಶನದ ಆರಂಭದ ದಿನವಾದ ಜು.20ರಂದು ಸಂಸತ್ ಚಲೋಗೆ ಜಿರಳೆ ಪಕ್ಷ ಕರೆ ನೀಡಿದೆ. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಬೇಕು ಎಂದು ಅದು ಕರೆ ನೀಡಿದೆ. ಜೊತೆಗೆ ವಿದ್ಯಾರ್ಥಿಗಳ ಪರವಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ ಸಂಸತ್ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಜಿರಳೆ ಪಕ್ಷದ ನಾಯಕರು ಹೇಳಿದ್ದಾರೆ.
2ನೇ ಸ್ವಾತಂತ್ರ್ಯ ಹೋರಾಟ:
ಈ ನಡುವೆ ಆಸ್ಪತ್ರೆಯಿಂದಲೇ ಸಂಸತ್ ಚಲೋಗೆ ಬೆಂಬಲ ವ್ಯಕ್ತಪಡಿಸಿದ ಲಿಖಿತ ಹೇಳಿಕೆ ಬಿಡುಗಡೆ ಮಾಡಿರುವ ಸೋನಂ ವಾಂಗ್ಚುಕ್, ‘ಭಯದಿಂದ ಸ್ವಾತಂತ್ರ್ಯ’ ಮತ್ತು ‘ಅನ್ಯಾಯದಿಂದ ಸ್ವಾತಂತ್ರ್ಯಕ್ಕಾಗಿ’ಕ್ಕೆ ಸೋಮವಾರದ ಹೋರಾಟವನ್ನು ಬೃಹತ್ ಪ್ರಮಾಣದಲ್ಲಿ ಯಶಸ್ವಿಗೊಳಿಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಗೀತಾಂಜಲಿ ಆಂಗ್ಮೋ ನೇತೃತ್ವ:
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಅಂದರೆ ಜು.20ರಂದು ಸಿಜೆಪಿ ಕರೆ ನೀಡಿರುವ ಸಂಸತ್ ಚಲೋ ಹೋರಾಟದ ನೇತೃತ್ವವನ್ನು ಸೋನಂ ವಾಂಗ್ಚುಕ್ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರೇ ವಹಿಸಿಕೊಳ್ಳುವುದು ಖಚಿತವಾಗಿದೆ.
ಇದು ಭಾರತದ 2ನೇ ಸ್ವಾತಂತ್ರ್ಯ ಚಳವಳಿ: ವಾಂಗ್ಚುಕ್
- ಕಾರ್ಯಕ್ರಮ ಯಶಸ್ವಿಗೊಳಿಸಲು ಬೆಂಬಲಿಗರಿಗೆ ಕರೆ
- ಆಸ್ಪತ್ರೆಯಿಂದಲೇ ಬೆಂಬಲಿಗರಿಗೆ ವಾಂಗ್ಚುಕ್ ಮನವಿ
