ವಿದೇಶದಿಂದ ವಾಪಸಾದ ಪಕ್ಷ ಸ್ಥಾಪಕ ದೀಪ್ಕೆ ನೇತೃತ್ವದಲ್ಲಿ ಜಿರಳೆ ಕಾರ್ಯಕರ್ತರ ಹೋರಾಟ
ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ಆಗ್ರಹನಮ್ಮ ಹೋರಾಟ ಹತ್ತಿಕ್ಕಲಾಗದು: ದೀಪ್ಕೆ ಕಿಡಿಜಾಲತಾಣದಲ್ಲಿ ಶುರುವಾಗಿದ್ದ ಆಂದೋಲನಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ನೇತೃತ್ವ
ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ಆಗ್ರಹಲಡಾಖ್ ಹೋರಾಟಗಾರ ವಾಂಗ್ಚುಕ್ ಭಾಗಿ
ಪಿಟಿಐ ನವದೆಹಲಿ
ಇತ್ತೀಚೆಗೆ ನಿರುದ್ಯೋಗ ಸೇರಿದಂತೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದಿದ್ದ ಯುವ ನೇತಾರ ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ (ಚಿಜೆಪಿ), ಶನಿವಾರ ಮೊದಲ ಬಾರಿ ಬೃಹತ್ ಪ್ರಮಾಣದಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಪರೀಕ್ಷೆಗಳಲ್ಲಿನ ಅಕ್ರಮದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ನೇತೃತ್ವದಲ್ಲಿ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್‌ನಲ್ಲಿ ಶನಿವಾರ ಬೃಹತ್ ಪ್ರತಿಭಟಿಸಿದರು.
ಶನಿವಾರ ಬೆಳಗ್ಗೆಯಷ್ಟೇ ವಿದೇಶದಿಂದ ಹಿಂತಿರುಗಿ ಪ್ರತಿಭಟನೆಯಲ್ಲಿ ಮಾತನಾಡಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಯಾವುದೇ ಒತ್ತಡಕ್ಕೂ ನಾವು ಹೆದರುವ ಪ್ರಶ್ನೆಯೇ ಇಲ್ಲ. ಮೊದಲು ಸಚಿವ ಪ್ರಧಾನ್ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆವು. ಆದರೆ ನಾಚಿಕೆಗೇಡಿನ ಜನರು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಬದಲು ನಮ್ಮ ಸಾಮಾಜಿಕ ಮಾಧ್ಯಮ ಬ್ಲಾಕ್ ಹಾಗೂ ಮಾಡುತ್ತಿದ್ದಾರೆ. ನೀವು ನಮ್ಮ ಪೋಸ್ಟ್ ಅಳಿಸಬಹುದು. ಆದರೆ ನೀವು ಈ ಸ್ಥಳದಿಂದ ನಮ್ಮನ್ನು ಅಳಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.ಹೋರಾಟಕ್ಕೆ ಲಡಾಖ್ ಹೋರಾಟಗಾರ ಸೋನಂ ವಾಂಗ್ಚುಕ್, ಸಿಪಿಐ (ಎಂಎಲ್) ಲಿಬರೇಶನ್ ನಾಯಕ ದೀಪಂಕರ ಭಟ್ಟಾಚಾರ್ಯ ಹಾಗೂ ಸಿಪಿಐ ನಾಯಕಿ ಆ್ಯನಿ ರಾಜಾ ಸಾಥ್ ನೀಡಿದರು.
ದಿನವಿಡೀ ಪ್ರತಿಭಟನೆ:ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ಬೆಳಿಗ್ಗೆ ಅಮೆರಿಕದಿಂದ ದೆಹಲಿ ಏರ್ಪೋರ್ಟ್‌ಗೆ ಬಂದಿಳಿದರು. ಈ ವೇಳೆ ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಕೈಯಲ್ಲಿ ಹಿಡಿದು ಗಮನ ಸೆಳೆದರು. ಪೊಲೀಸ್ ಅಧಿಕಾರಿಗಳು ಅಲ್ಲಿಯೇ ಅವರನ್ನು ಭೇಟಿಯಾದಾಗ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಸಿಕ್ಕಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸುಮಾರು 2,000 ಪೊಲೀಸರನ್ನು ಜಂತರ್ ಮಂತರ್, ಇಂದಿರಾ ಗಾಂಧಿ ಏರ್ಪೋರ್ಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು.ಪೊಲೀಸರಿಗೆ ಹೂವು ಕೊಟ್ಟ ಜಿರಳೆಗಳು:ಪ್ರತಿಭಟನೆಯನ್ನು ಪ್ರೀತಿ ಮತ್ತು ಶಾಂತಿಯಿಂದ ಮುನ್ನಡೆಸಬೇಕು ಎಂದು ಪ್ರತಿಭಟನಾಕಾರರಿಗೆ ದೀಪ್ಕೆ ಕರೆ ನೀಡಿದ್ದರು. ಕರುಣೆ ಮತ್ತು ಕೃತಜ್ಞತೆಯ ಸೂಚಕವಾಗಿ ಪೊಲೀಸ್ ಸಿಬ್ಬಂದಿಗೆ ಹೂವುಗಳನ್ನು ನೀಡುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಪ್ರತಿಭಟನಾಕಾರರು ಜಿರಳೆಯ ಮುಖವಾಡ ತೊಟ್ಟು, ಪೊಲೀಸರಿಗೆ ಹೂವು ನೀಡಿದ ದೃಶ್ಯಗಳು ಕಂಡುಬಂದವು.ಯುವಕರೇ ಹೆಚ್ಚು:
ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು ತಮ್ಮ ಪೋಷಕರ ಜತೆ ಪಾಲ್ಗೊಂಡಿದ್ದರು. ಸ್ಥಳದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.ಸೋನಂ ವಾಂಗ್ಚುಕ್ ಭಾಗಿ:ಸಿಜೆಪಿ ಪ್ರತಿಭಟನೆಯಲ್ಲಿ ಲಡಾಖ್‌ನ ಎಂಜಿನಿಯರ್, ಶಿಕ್ಷಣ ಸುಧಾರಕ ಮತ್ತು ಹೋರಾಟಗಾರ ಸೋನಮ್ ವಾಂಗ್ ಚುಕ್ ಭಾಗವಹಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆ ಕೇವಲ ಆರಂಭ ಅಷ್ಟೇ. ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ದೊಡ್ಡ ಗುರಿ. ದೀಪ್ಕೆಯನ್ನು ಬಂಧಿಸಿದರೆ 6 ವಾರಗಳ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.
6 ಮಂದಿ ವಶಕ್ಕೆ:ಪ್ರತಿಭಟನೆ ವೇಳೆ ಜಿರಳೆ ಪಾರ್ಟಿ ವಿರೋಧಿ ಗುಂಪೊಂದು ಬಂದಿತ್ತು. ಹೀಗಾಗಿ 2 ಗುಂಪುಗಳ ನಡುವೆ ನಡೆಯಬಹುದಾಗಿದ್ದ ಸಂಘರ್ಷವನ್ನು ತಡೆಯಲು ದೆಹಲಿ ಪೊಲೀಸರು 6 ಜನರನ್ನು ವಶಕ್ಕೆ ಪಡೆದರು.
=-ಏನಿದು ಸಿಜೆಪಿ? ಆರಂಭವಾಗಿದ್ದು ಏಕೆ?:ಇತ್ತೀಚೆಗೆ ಭಾರತದ ಮುಖ್ಯ ನ್ಯಾ। ಸೂರ್ಯಕಾಂತ್, ‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ಧಾರೆ’ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ವಿರೋಧಿಸಿ ದೀಪ್ಕೆ ಜಿರಳೆ ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಆನ್ಲೈನ್ ಅಭಿಯಾನ ಆರಂಭಿಸಿದರು. ಈ ಅಭಿಯಾನದ ಮೂಲಕ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗ, ಸರ್ಕಾರದ ಆಡಳಿತ ವೈಫಲ್ಯ ಮುಂತಾದ ವಿಚಾರಗಳನ್ನು ಟೀಕಿಸಲಾಗುತ್ತಿದೆ. ಆರಂಭವಾದ ಕೇವಲ ಒಂದೇ ವಾರದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುವ ಮೂಲಕ ಸಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿತ್ತು.ಇದೀಗ ನೀಟ್, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು.