ಜೂ.24ರಿಂದ ಸಂಸತ್‌ ವಿಶೇಷ ಅಧಿವೇಶನ?

| Published : Jun 12 2024, 12:31 AM IST

ಸಾರಾಂಶ

18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸಂಸದರ ಪ್ರಮಾಣ ಸ್ವೀಕಾರ ಹಾಗೂ ಮಹತ್ವದ ಸ್ಪೀಕರ್‌ ಆಯ್ಕೆಯ ಸಂಬಂಧ ಜೂ.24ರಿಂದ ಸಂಸತ್‌ ವಿಶೇಷ ಅಧಿವೇಶನ ಆಯೋಜಿಸುವ ಸಾಧ್ಯತೆ ಇದೆ.

ನವದೆಹಲಿ: 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸಂಸದರ ಪ್ರಮಾಣ ಸ್ವೀಕಾರ ಹಾಗೂ ಮಹತ್ವದ ಸ್ಪೀಕರ್‌ ಆಯ್ಕೆಯ ಸಂಬಂಧ ಜೂ.24ರಿಂದ ಸಂಸತ್‌ ವಿಶೇಷ ಅಧಿವೇಶನ ಆಯೋಜಿಸುವ ಸಾಧ್ಯತೆ ಇದೆ.

ಜೂ.24 ಮತ್ತು 25ರಂದು ರಾಷ್ಟ್ರಪತಿ ನೇಮಿಸುವ ಹಂಗಾಮಿ ಸ್ಪೀಕರ್‌ ನೂತನ ಸಂಸದರಿಗೆ ಪ್ರಮಾಣ ಬೋಧಿಸಲಿದ್ದಾರೆ. ಜೂ.26ರಂದು ಸಭಾದ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಕಳೆದೆರಡು ಬಾರಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ ಕಾರಣ ತನ್ನ ಸಂಸದರನ್ನೇ ಸಭಾಧ್ಯಕ್ಷರ ಸ್ಥಾನದಲ್ಲಿ ಕೂರಿಸಿತ್ತು. ಆದರೆ ಈ ಬಾರಿ ಬಿಜೆಪಿಯ ಜೊತೆಗೆ ಪ್ರಮುಖ ಮಿತ್ರಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ಕೂಡ ಸ್ಪೀಕರ್‌ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿಯಿಂದ ರಾಜಮಂಡ್ರಿ ಸಂಸದೆ ಪುರಂದೇಶ್ವರಿ ಅವರ ಹೆಸರು ಕೇಳಿಬರುತ್ತಿದ್ದರೆ, ಟಿಡಿಪಿಯಿಂದ ರಾಮಮೋಹನ್‌ ನಾಯ್ಡು ಹಾಗೂ ಹರೀಶ್‌ ಮಾಧೂರ್ ಅವರ ಹೆಸರು ಚಾಲ್ತಿಯಲ್ಲಿದೆ.

ನೂತನ ಸ್ಪೀಕರ್‌ ನೇತೃತ್ವದಲ್ಲಿ ಜೂ.27ರಿಂದ ವಿಶೇಷ ಅಧಿವೇಶನ ಮುಂದುವರೆಯಲಿದ್ದು, ಜು.3ಕ್ಕೆ ಅಂತ್ಯಗೊಳ್ಳಲಿದೆ.