-ಚೆನ್ನೈ ಏರ್ಪೋರ್ಟ್‌ನಲ್ಲಿ ಆತಂಕಕಾರಿ ಘಟನೆ- ಹೊರಜಿಗಿದ ಪ್ರಯಾಣಿಕನ ಬಂಧನ, ತನಿಖೆ

- ಆತನಿಗೆ ವಾಂತಿ ಬರುತ್ತಿದ್ದ ಕಾರಣ ಕೃತ್ಯ ಶಂಕೆಚೆನ್ನೈ: ವಿಮಾನವು ಲ್ಯಾಂಡ್‌ ಆದ ಬಳಿಕ ಇನ್ನೂ ನಿಧಾನ ಚಲನೆಯಲ್ಲಿದ್ದಾಗಲೇ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರವನ್ನು ತೆರೆದು ಹೊರಜಿಗಿದ ಆತಂಕಕಾರಿ ಘಟನೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಅಥವಾ ವಿಮಾನಕ್ಕೆ ಹಾನಿ ಸಂಭವಿಸಿಲ್ಲ.

ಭಾರೀ ಭದ್ರತಾ ಲೋಪವೆಸಗಿದ ವ್ಯಕ್ತಿಯನ್ನು ಪುದುಕ್ಕೊಟ್ಟೈನ 34 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ‘ಆತ ವಿಮಾನದಲ್ಲಿ 2 ಬಾರಿ ವಾಂತಿ ಮಾಡಿದ್ದ. 3ನೇ ಬಾರಿಯೂ ವಾಂತಿ ಬಂದಾಗ ಹೀಗೆ ಮಾಡಿರಬಹುದು’ ಎಂಬ ಶಂಕೆ ಇದೆ. ಆದಾಗ್ಯೂ ಆತನನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಘಟನೆಯಿಂದಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಸ್ವಲ್ಪ ಸಮಯ ಅಡ್ಡಿಯಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಮುಖ್ಯ ರನ್‌ವೇಯನ್ನು ಬೆಳಿಗ್ಗೆ 03:23ರಿಂದ ಬೆಳಿಗ್ಗೆ 04:23ರವರೆಗೆ ಮುಚ್ಚಲಾಯಿತು. ಆ ಅವಧಿಯಲ್ಲಿ ವಿಮಾನಗಳನ್ನು 2ನೇ ರನ್‌ವೇಗೆ ತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಗಿದ್ದೇನು?: 231 ಪ್ರಯಾಣಿಕರನ್ನು ಹೊತ್ತ ಏರ್‌ ಅರೇಬಿಯಾ ವಿಮಾನವು ಶರ್ಜಾದಿಂದ ಭಾನುವಾರ ಬೆಳಗ್ಗೆ ಚೆನ್ನೈಗೆ ಬಂದಿಳಿದಿತ್ತು. ರನ್‌ವೇಗೆ ಸಂಪರ್ಕಿಸುವ ಟ್ಯಾಕ್ಸಿವೇಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವೇಳೆ, ವ್ಯಕ್ತಿ ತುರ್ತು ದ್ವಾರವನ್ನು ತೆರೆದು ಹೊರಜಿಗಿದಿದ್ದಾನೆ. ಪೈಲಟ್ ತಕ್ಷಣ ವಿಮಾನವನ್ನು ನಿಲ್ಲಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆಗ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಬಾಂಬ್ ನಿಷ್ಕ್ರಿಯ ದಳ ಮತ್ತು ಸಶಸ್ತ್ರ ಅಧಿಕಾರಿಗಳು ವಿಮಾನ ನಿಂತಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಬಗ್ಗೆ ಪೈಲಟ್ ಅಧಿಕಾರಿಗಳಿಗೆ ಔಪಚಾರಿಕ ದೂರು ಸಲ್ಲಿಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ವಿಮಾನವನ್ನು ಹತ್ತಿ, ಪ್ರಯಾಣಿಕನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

2 ಬಾರಿ ವಾಂತಿ ಮಾಡಿದ್ದ: ‘ತುರ್ತು ದ್ವಾರದಿಂದ ಜಿಗಿದ ಪ್ರಯಾಣಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ತನಗೆ ವಾಂತಿಯಾಗುತ್ತಿದೆ ಎಂದು ತಿಳಿಸಿದ್ದ. ಪ್ರಯಾಣದ ವೇಳೆ 2 ಬಾರಿ ವಾಂತಿ ಮಾಡಿಕೊಂಡಿದ್ದ ಎನ್ನಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅನಾರೋಗ್ಯದ ಕಾರಣ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ.