ಸಾರಾಂಶ
ತಪ್ಪು ದಾರಿಗೆಳೆಯುವ ಪತಂಜಲಿ ಜಾಹೀರಾತು ಪ್ರಕರಣದಲ್ಲಿ ನಿಯಮಗಳ ಅನುಸರಣೆ ಬಗ್ಗೆ ಸರಿಯಾದ ಅಫಿಡವಿಟ್‌ಗಳನ್ನು ಸಲ್ಲಿಸದೆ ಹಟಮಾರಿ ಧೋರಣೆ ತಾಳಿದ್ದೀರಿ ಹಾಗೂ ಈ ಹಿಂದೆ ನೀವು ಕೇಳಿದ್ದು ಕೇವಲ ತೋರಿಕೆಯ ಕ್ಷಮೆ ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನವದೆಹಲಿ : ತಪ್ಪು ದಾರಿಗೆಳೆಯುವ ಪತಂಜಲಿ ಜಾಹೀರಾತು ಪ್ರಕರಣದಲ್ಲಿ ನಿಯಮಗಳ ಅನುಸರಣೆ ಬಗ್ಗೆ ಸರಿಯಾದ ಅಫಿಡವಿಟ್‌ಗಳನ್ನು ಸಲ್ಲಿಸದೆ ಹಟಮಾರಿ ಧೋರಣೆ ತಾಳಿದ್ದೀರಿ ಹಾಗೂ ಈ ಹಿಂದೆ ನೀವು ಕೇಳಿದ್ದು ಕೇವಲ ತೋರಿಕೆಯ ಕ್ಷಮೆ ಎಂದು ಯೋಗ ಗುರು ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.ಇದೇ ವೇಳೆ ಭಾರತದ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ (ಮ್ಯಾಜಿಕ್ ರೆಮಿಡೀಸ್) ಕಾಯ್ದೆ ‘ತುಂಬಾ ಪುರಾತನ’ವಾಗಿದೆ ಎಂಬ ಬಾಲಕೃಷ್ಣ ಹೇಳಿಕೆಯನ್ನು ಸಹ ಅದು ತಳ್ಳಿಹಾಕಿದೆ. ಕೊನೆಗೆ, 1 ವಾರದಲ್ಲಿ (ಏ.10ರೊಳಗೆ) ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಲು ರಾಮದೇವ್ ಮತ್ತು ಬಾಲಕೃಷ್ಣ ಅವರಿಗೆ ಪೀಠವು ಕೊನೆಯ ಅವಕಾಶವನ್ನು ನೀಡಿದೆ.
ಪತಂಜಲಿ ಆಯುರ್ವೇದ ಕಂಪನಿಯು ಆಯುರ್ವೇದ ಉತ್ಪನ್ನಗಳನ್ನು ವೈಭವೀಕರಿಸಿ ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ತೆಗಳಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಡಿ) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆಗ ರಾಮದೇವ್ ಹಾಗೂ ಬಾಲಕೃಷ್ಣಗೆ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಇಂಥ ಜಾಹೀರಾತು ನೀಡಲ್ಲ ಎಂದು ಆಗ ರಾಮದೇವ್ ಹಾಗೂ ಬಾಲಕೃಷ್ಣ ಕೋರ್ಟಿಗೆ ಹೇಳಿದ್ದರೂ, ಅದು ಪಾಲನೆ ಆಗಿಲ್ಲ ಎಂದು ಪೀಠ ಕಿಡಿಕಾರಿದೆ.
ಕೋರ್ಟ್ ಚಾಟಿ:
‘ಸುಪ್ರೀಂ ಕೋರ್ಟ್ ಮಾತ್ರವಲ್ಲ, ಈ ದೇಶದಾದ್ಯಂತ ಕೋರ್ಟುಗಳು ನೀಡುವ ಪ್ರತಿ ಆದೇಶವನ್ನು ಗೌರವಿಸಬೇಕು. ನೀವು ಕೋರ್ಟಿಗೆ ನೀಡಿದ ಭರವಸೆಗೆ ಬದ್ಧರಾಗಿರಬೇಕು. ಆದರೆ ಅದಕ್ಕೆ ವಿರುದ್ಧವಾಗಿ ನೀವು ನಡೆದುಕೊಂಡಿದ್ದೀರಿ’ ಎಂದು ಪೀಠವು ಖುದ್ದು ಹಾಜರಿದ್ದ ರಾಮದೇವ್ ಮತ್ತು ಪತಂಜಲಿ ಎಂಡಿಗೆ ಚಾಟಿ ಬೀಸಿದೆ.
ಕೇಂದ್ರಕ್ಕೂ ತರಾಟೆ:
ಇದೇ ವೇಳೆ ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡ ಪೀಠ, ‘ಅಲೋಪತಿಯಲ್ಲಿ ಕೋವಿಡ್‌ಗೆ ಯಾವುದೇ ಪರಿಹಾರವಿಲ್ಲ ಎಂದು ಪತಂಜಲಿ ಪ್ರಚಾರ ಮಾಡಿದಾಗ ನೀವೇಕೆ ಕಣ್ಮುಚ್ಚಿ ಕುಳಿತಿದ್ದಿರಿ’ ಎಂದಿದೆ.