ಸಾರಾಂಶ
ಕೇರಳದ ವಯನಾಡಿನಲ್ಲಿ ಸತತ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ತಿರುವನಂತಪುರ: ಕೇರಳದ ವಯನಾಡಿನಲ್ಲಿ ಸತತ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಹಾಲಿ ಇದೇ ಕ್ಷೇತ್ರದ ಸಂಸದರಾಗಿರುವ ರಾಹುಲ್, ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್‌ಶೋ ನಡೆಸಿ ಶಕ್ತಿಪ್ರದರ್ಶನ ಮಾಡಲಿದ್ದಾರೆ. ರಾಹುಲ್ ಕಳೆದ ಬಾರಿ ಇಲ್ಲಿ 4.31 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಆದರೆ ಈ ಬಾರಿ ರಾಹುಲ್‌ಗೆ ಬಿಜೆಪಿಯಿಂದ ರಾಜ್ಯಾಧ್ಯಕ್ಷ ಸುರೇಂದ್ರನ್ ಮತ್ತು ಸಿಪಿಐ ಕಾರ್ಯದರ್ಶಿ ರಾಜಾ ಅವರ ಪತ್ನಿ ಆ್ಯನಿ ರಾಜಾ ತೀವ್ರ ಸ್ಪರ್ಧೆ ಒಡ್ಡುತ್ತಿದ್ದಾರೆ.
ಈ ನಡುವೆ ರಾಹುಲ್ ನಾಮಪತ್ರ ಸಲ್ಲಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸುರೇಂದ್ರನ್, ‘ಅಂತೂ ರಾಹುಲ್ ನಾಮಪತ್ರ ಸಲ್ಲಿಕೆಯ ಸಲುವಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇವರು ಸಂಸದರಾಗಿ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೆಲವೇ ಬಾರಿ ಕಾಣಿಸಿಕೊಂಡಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ’ ಎಂದು ಕಿಡಿಕಾರಿದ್ದಾರೆ.