ಸಾರಾಂಶ
ಲಖನೌ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿ ಆಕ್ಸಿಯೋಂ-4 ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಮಂಗಳವಾರ ಭೂಮಿಗೆ ಬಂದಿಳಿಯುತ್ತಿದ್ದಂತೆ, ಅವರ ಹುಟ್ಟೂರು ಲಖನೌನಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿದೆ.
ನಗರದ ಮಾಂಟೆಸ್ಸರಿ ಶಾಲೆಯ (ಸಿಎಂಎಸ್) ಕಾನ್ಪುರ ರಸ್ತೆಯ ಕ್ಯಾಂಪಸ್‌ನಲ್ಲಿ ಶುಕ್ಲಾ ತಂದೆ, ತಾಯಿ, ಸಹೋದರಿ, ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರೊಂದಿಗೆ ಶುಕ್ಲಾರನ್ನು ಹೆಮ್ಮೆ, ಸಂಭ್ರಮದಿಂದ ಚಪ್ಪಾಳೆ ತಟ್ಟಿ ಭೂಮಿಗೆ ಸ್ವಾಗತಿಸಿದರು.
ಶುಕ್ಲಾರನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ಭೂಮಿಗೆ ಬರುತ್ತಿದ್ದಂತೆ, ಅವರ ಕುಟುಂಬಸ್ಥರ ಮುಖ ಅರಳಿತ್ತು, ಕಣ್ಣುಗಳು ಮಿನುಗುತ್ತಿದ್ದವು. ಅರಿವೇ ಇಲ್ಲದಂತೆ ಕಣ್ಣಿನಿಂದ ಆನಂದಬಾಷ್ಪ ಇಳಿಯುತ್ತಿತ್ತು. ನೌಕೆ ಕ್ಯಾಲಿಫೋರ್ನಿಯಾದ ಕಡಲಿಗೆ ಅಪ್ಪಳಿಸುತ್ತಿದ್ದಂತೆ ಶುಕ್ಲಾ ಅವರ ತಾಯಿ ಆಶಾದೇವಿ ಕೈಯಲ್ಲಿ ಪುಟ್ಟ ತ್ರಿವರ್ಣ ಧ್ವಜವನ್ನು ಹಿಡಿದು ಮಗನನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಭೂಮಿಯನ್ನು ತಲುಪುತ್ತಿದ್ದಂತೆ ಸಿಎಂಎಎಸ್ ಆಡಳಿತ ಮಂಡಳಿ ಜೊತೆ ಶುಕ್ಲಾ ಕುಟುಂಬಸ್ಥರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
‘ನನ್ನ ಮಗ ಬಾಹ್ಯಾಕಾಶಕ್ಕೆ ಹೋಗಿ ಹಿಂತಿರುಗಿದ್ದಾನೆ. ನಾವೆಲ್ಲರೂ ಚಂದ್ರನ ಮೇಲಿದ್ದೇವೆ. ಏಕೆಂದರೆ ಈ ಮಿಷನ್ ದೇಶದ ಗಗನಯಾನ ಕಾರ್ಯಕ್ರಮಕ್ಕೆ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿದೆ’ ಎಂದು ಶುಕ್ಲಾ ಅವರ ತಂದೆ ಶಂಭು ದಯಾಳ್ ಶುಕ್ಲಾ ಸಂಭ್ರಮದಿಂದ ಹೇಳಿದರು.
ಶುಕ್ಲಾ ಅವರ ಸಹೋದರಿ ಸುಚಿ ಮಿಶ್ರಾ ಮಾತನಾಡಿ, ‘ಕಳೆದ 18 ದಿನಗಳಲ್ಲಿ, ನನ್ನ ಸಹೋದರನ ಬಾಹ್ಯಾಕಾಶ ಪ್ರಯಾಣದ ಬಗ್ಗೆ ನಾವು ತುಂಬಾ ಮಾತನಾಡಿದ್ದೇವೆ. ಈಗ ಅವನು ಭೂಮಿಯನ್ನು ತಲುಪುತ್ತಿದ್ದಂತೆ ಮಾತಾಡಲು ಪದಗಳೇ ಸಿಗುತ್ತಿಲ್ಲ. ದೇಶಕ್ಕಾಗಿ ನನ್ನ ಸಹೋದರ ಏನನ್ನು ಸಾಧಿಸಲು ಹೊರಟಿದ್ದನೋ ಅದನ್ನು ಸಾಧಿಸಿದ್ದಾನೆ ಎಂಬುದು ತುಂಬಾ ನಿರಾಳತೆ ತಂದಿದೆ’ ಎಂದರು.
ಸಿಎಂಎಸ್ ವ್ಯವಸ್ಥಾಪಕಿ ಪ್ರೊ. ಗೀತಾ ಗಾಂಧಿ ಕಿಂಗ್ಡನ್ ಮಾತನಾಡಿ, ‘ಶುಭಾಂಶು ಅವರ ಯಶಸ್ಸು ನಮ್ಮ ವಿದ್ಯಾರ್ಥಿಗಳಲ್ಲಿ ಹೊಸ ಕಲ್ಪನೆಯನ್ನು ಹುಟ್ಟುಹಾಕಿದೆ. ಸಿಎಂಎಸ್‌ನ ಧ್ಯೇಯವಾಕ್ಯ ‘ಜೈ ಜಗತ್’ಗೆ ಶುಕ್ಲಾ ನಿದರ್ಶನವಾಗಿದ್ದಾರೆ. ಬಾಹ್ಯಾಕಾಶವು ಕಲ್ಪನೆಯಲ್ಲ, ಅದು ನಮ್ಮ ಭವಿಷ್ಯ ಎಂದು ಅವರು ತೋರಿಸಿಕೊಟ್ಟಿದ್ದಾರೆ’ ಎಂದರು.
ನಾವು ಚಂದ್ರನ ಮೇಲಿದ್ದೇವೆ ನನ್ನ ಮಗ ಬಾಹ್ಯಾಕಾಶಕ್ಕೆ ಹೋಗಿ ಹಿಂತಿರುಗಿದ್ದಾನೆ. ನಾವೆಲ್ಲರೂ ಚಂದ್ರನ ಮೇಲಿದ್ದೇವೆ. ಏಕೆಂದರೆ ಈ ಮಿಷನ್ ದೇಶದ ಗಗನಯಾನ ಕಾರ್ಯಕ್ರಮಕ್ಕೆ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿದೆ.
ಶಂಭುದಯಾಳ ಶುಕ್ಲಾ, ಶುಭಾಂಶು ತಂದೆ