ಸಾರಾಂಶ
ಅಗರ್ತಲಾ: ಹಿಂದೂಗಳ ಮೇಲಿನ ದೌರ್ಜನ್ಯದಿಂದ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಹಾಗೂ ಅರಾಜಕತೆ ತಾಂಡವವಾಡುತ್ತಿರುವ ಬಾಂಗ್ಲಾದೇಶವು ತ್ರಿಪುರ ಸರ್ಕಾರಕ್ಕೆ 135 ಕೋಟಿ ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಿಲ್ ಅನ್ನು ಕೂಡಲೇ ಕಟ್ಟಬೇಕು ಎಂದು ತ್ರಿಪುರ ಸರ್ಕಾರವು ಬಾಂಗ್ಲಾದೇಶ ಸರ್ಕಾರಕ್ಕೆ ತಾಕೀತು ಮಾಡಿದೆ.ಇತ್ತಿಚೆಗೆ ಅದಾನಿ ಪವರ್ ಕಂಪನಿ ಬಳಿಯೂ ಬಾಂಗ್ಲಾದೇಶ ಸರ್ಕಾರ ನೂರಾರು ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಬಾಂಗ್ಲಾಗೆ ಅದಾನಿ ಕಂಪನಿ ವಿದ್ಯುತ್ ಪೂರೈಕೆ ಮೊಟಕುಗೊಳಿಸಿತ್ತು. ಅದರ ಬೆನ್ನಲ್ಲೇ ತ್ರಿಪುರ ಸರ್ಕಾರದಿಂದಲೂ ಅಂಥದ್ದೇ ಎಚ್ಚರಿಕೆ ರವಾನೆಯಾಗಿದೆ.
ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮದ ಮೂಲಕ ತ್ರಿಪುರ ಸರ್ಕಾರವು ಬಾಂಗ್ಲಾದೇಶಕ್ಕೆ ಯೂನಿಟ್‌ಗೆ 6.65 ರು. ದರದಲ್ಲಿ 160 ಮೆಗಾ ವ್ಯಾಟ್ ವಿದ್ಯುತ್ ಪೂರೈಸುತ್ತದೆ. ಆದರೆ ಕಳೆದ 1 ವರ್ಷದಿಂದ ಬಾಂಗ್ಲಾದೇಶ ಬಿಲ್ ಸರಿಯಾಗಿ ಕಟ್ಟುತ್ತಿಲ್ಲ. ಈ ಬಗ್ಗೆ ಮೇ ತಿಂಗಳಲ್ಲೂ ಎಚ್ಚರಿಕೆ ನೀಡಲಾಗಿತ್ತು’ ಎಂದು ತ್ರಿಪುರ ವಿದ್ಯುತ್ ಸಚಿವ ರತನ್‌ಲಾಲ್ ನಾಥ್ ಹೇಳಿದ್ದಾರೆ.
ಬಾಂಗ್ಲಾದಲ್ಲಿ ವಿಶ್ವಸಂಸ್ಥೆ ಶಾಂತಿಪಡೆ ನಿಯೋಜನೆಗೆ ದೀದಿ ಆಗ್ರಹ
ಕೋಲ್ಕತಾ: ನೆರೆಯ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದು, ಅಲ್ಲಿ ವಿಶ್ವಸಂಸ್ಥೆಯು ಶಾಂತಿ ಪಾಲನಾ ಪಡೆ ನಿಯೋಜನೆಗೆ ಒತ್ತಡ ಹೇರಬೇಕು ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಮಮತಾ, ‘ಅಗತ್ಯವಿದ್ದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಂದಿಗೆ ಮಾತನಾಡಿದ ಬಳಿಕ ಅಂತಾರಾಷ್ಟ್ರೀಯ ಶಾಂತಿಪಾಲನಾ ಪಡೆಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಯತ್ನಿಸಬೇಕು. ಅದು ಶಾಂತಿಯನ್ನು ಮರುಸ್ಥಾಪಿಸಲು ನೆರವಾಗುತ್ತದೆ. ಈ ಬಗ್ಗೆ ಮೋದಿ ಆಗಲಿ ಅಥವಾ ವಿದೇಶಾಂಗ ಸಚಿವರಾಗಲಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಬಾಂಗ್ಲಾದಲ್ಲಿ ದಾಳಿಗೀಡಾದ ಭಾರತೀಯರಿಗೆ ಪುನರ್ವಸತಿಯ ಅಗತ್ಯವಿದ್ದರೆ ಕಲ್ಪಿಸುತ್ತೇವೆ. ಅಗತ್ಯವಿದ್ದಲ್ಲಿ ನಮ್ಮ ಒಂದು ರೊಟ್ಟಿಯನ್ನು ಅವರೊಂದಿಗೆ ಹಂಚಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ’ ಎಂದರು.