ತನ್ನದೇ ಪೇಮೆಂಟ್‌ ಬ್ಯಾಂಕ್‌ ನಂಟು ಕಡಿದುಕೊಳ್ಳಲು ಪೇಟಿಎಂ ನಿರ್ಧಾರ

| Published : Feb 03 2024, 01:48 AM IST / Updated: Feb 03 2024, 07:43 AM IST

ತನ್ನದೇ ಪೇಮೆಂಟ್‌ ಬ್ಯಾಂಕ್‌ ನಂಟು ಕಡಿದುಕೊಳ್ಳಲು ಪೇಟಿಎಂ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಇತರೆ ಬ್ಯಾಂಕ್‌ಗಳ ಜೊತೆ ಪಾಲುದಾರಿಕೆಗೆ ಪೇಟಿಎಂ ನಿರ್ಧಾರ ಮಾಡಿದೆ. ಫೆ.29ರ ನಂತರವೂ ನಮ್ಮ ಕೆಲಸ ಅಬಾಧಿತ ಎಂದು ಒನ್‌97 ಕಮ್ಯುನಿಕೇಷನ್‌ ಮುಖ್ಯಸ್ಥ ವಿಜಯ್‌ ಶಂಕರ್‌ ಶರ್ಮಾ ತಿಳಿಸಿದ್ದಾರೆ.

ಮುಂಬೈ: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ (ಪಿಪಿಬಿಎಲ್‌) ಮೇಲೆ ರಿಸರ್ವ್‌ ಬ್ಯಾಂಕ್‌ ಫೆ.29ರಿಂದ ಹಲವು ನಿರ್ಬಂಧಗಳನ್ನು ಹೇರುತ್ತಿರುವ ಹಿನ್ನೆಲೆಯಲ್ಲಿ, ಆ ಬ್ಯಾಂಕ್‌ ಜೊತೆಗಿನ ಎಲ್ಲಾ ನಂಟನ್ನು ಕಡಿದುಕೊಂಡು, ಇತರೆ ಬ್ಯಾಂಕ್‌ಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಪೇಟಿಎಂನ ಮಾತೃಸಂಸ್ಥೆಯಾದ ಒನ್‌ 97 ಕಮ್ಯುನಿಕೇಷನ್‌ ತಿಳಿಸಿದೆ.

ಈ ಮೂಲಕ ಫೆ.29ರಂದು ಆರ್‌ಬಿಐ ನಿರ್ಬಂಧ ಜಾರಿಗೆ ಬಂದ ನಂತರವೂ ತನ್ನ ಕಾರ್ಯಾಚರಣೆಯನ್ನು ಅಬಾಧಿತವಾಗಿ ನಡೆಸಲು ಪೇಟಿಎಂ ಯತ್ನಿಸಿದೆ.

ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿರುವ ಒನ್‌ 97 ಕಮ್ಯುನಿಕೇಷನ್‌ನ ಮುಖ್ಯಸ್ಥ ವಿಜಯ್‌ ಶಂಕರ್‌ ಶರ್ಮಾ, ‘ಸದ್ಯದ ಬೆಳವಣಿಗೆ ನಮ್ಮ ಪ್ರಗತಿಯ ಹಾದಿಯಲ್ಲೊಂದು ಅಡ್ಡಗಾಲು. ಆದರೆ ಇದನ್ನು ದಾಟಿ ನಾವು ಮುಂದೆ ಹೋಗಲಿದ್ದೇವೆ. 

ಪಿಪಿಬಿಎಲ್‌ ಜೊತೆಗಿನ ವ್ಯವಹಾರ ಕಡಿದುಕೊಂಡು, ಇತರೆ ಬ್ಯಾಂಕ್‌ಗಳ ಜೊತೆ ಪಾಲುದಾರಿಕೆ ಮಾರಿಕೊಳ್ಳಲಿದ್ದೇವೆ. ಹೀಗೆ ಪಿಪಿಬಿಎಲ್‌ನಿಂದ ಇತರೆ ಬ್ಯಾಂಕ್‌ಗಳಿಗೆ ಏಕಕಾಲಕ್ಕೆ ಗ್ರಾಹಕರ ಬ್ಯಾಂಕ್‌ ಖಾತೆ ಹೇಗೆ ವರ್ಗ ಸಾಧ್ಯ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದರು.

‘ಜೊತೆಗೆ ಅಡೆತಡೆಗಳ ಹೊರತಾಗಿಯೂ ನಾವು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಫೆ.29ರ ಬಳಿಕವೂ ನಾವು ಕಾರ್ಯನಿರ್ವಹಿಸಲಿದ್ದೇವೆ’ ಎಂದು ಶರ್ಮಾ ಭರವಸೆ ನೀಡಿದರು.

ಈ ಹಿಂದೆ ಯೆಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವೇಳೆ ಅದರ ಮೂಲಕ ವ್ಯವಹಾರ ಮಾಡುತ್ತಿದ್ದ ಫೋನ್‌ ಪೇ ಕೂಟ ಸಂಕಟಕ್ಕೆ ಸಿಲುಕಿತ್ತು. ಆದರೆ ನಂತರ ಅದು ಬೇರೆ ಬ್ಯಾಂಕ್‌ಗಳ ಜತೆ ಒಪ್ಪಂದ ಮಾಡಿಕೊಂಡು ವಹಿವಾಟು ಅಬಾಧಿತವಾಗಿ ಮುಂದುವರಿಸಿತ್ತು.

ಪಿಪಿಬಿಎಲ್‌ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದು ಲೆಕ್ಕಪರಿಶೋಧನೆ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ ಫೆ.29ರ ಬಳಿಕ ಹೊಸ ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ ಹಾಗೂ ಫಾಸ್ಟ್ಯಾಗ್‌ ಸೇವೆ ನೀಡಕೂಡದು, ಯಾವುದೇ ಠೇವಣಿ ಅಥವಾ ಸಾಲ ನೀಡಬಾರದು,

 ಗ್ರಾಹಕರಿಗೆ ಟಾಪ್‌ಅಪ್‌ ನೀಡುವಿಕೆ ಅಥವಾ ಪೂರ್ವಪಾವತಿ ಸಾಧನ, ವ್ಯಾಲೆಟ್‌, ಫಾಸ್ಟ್‌ಟ್ಯಾಗ್‌, ಎನ್‌ಸಿಎಂಸಿ ಕಾರ್ಡ್‌ ಹಾಗೂ ಇತರ ಸೇವೆಗಳನ್ನು ನೀಡುವಂತಿಲ್ಲ ಎಂದು ಆರ್‌ಬಿಐ ಬುಧವಾರ ನಿರ್ಬಂಧ ವಿಧಿಸಿತ್ತು.

 ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳ ಅವಧಿಯಲ್ಲಿ ಪೇಟಿಎಂ ಷೇರು 761 ರು.ನಿಂದ 487 ರು.ಗೆ ಇಳಿಕೆ ಕಂಡಿದೆ. ಅಂದರೆ 275 ರು. ಕುಸಿತ ಕಂಡಿದೆ. ಪರಿಣಾಮ ಹೂಡಿಕೆದಾರರಿಗೆ 17500 ಕೋಟಿ ರು.ನಷ್ಟು ನಷ್ಟವಾಗಿದೆ.