ಯಾರಾದರೂ ಬಂದು ನಮ್ಮನ್ನು ಕಾಪಾಡಿ....

| Published : Jul 31 2024, 01:05 AM IST

ಸಾರಾಂಶ

ಯಾರಾದರೂ, ದಯವಿಟ್ಟು ಬಂದು ನಮ್ಮನ್ನು ಕಾಪಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನೌಶೀನ್‌ ಬದುಕಿದ್ದಾಳೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಅಕೆ ಕೆಸರಿನಡಿ ಸಿಕ್ಕಿಬಿದ್ದಿದ್ದಾಳೆ....ಇದು ಭೀಕರ ಭೂಕುಸಿತಕ್ಕೆ ತುತ್ತಾದ ವಯನಾಡಿನ ಚೂರಲ್‌ಮಲ ಗ್ರಾಮದ ಮಹಿಳೆಯೊಬ್ಬರು ತಮ್ಮ ಸಂಬಂಧಿಯೊಬ್ಬರಿಗೆ ಮೊಬೈಲ್‌ ಕರೆ ಮಾಡಿ ನೆರವಿಗಾಗಿ ಯಾಚಿಸಿದ ವೇಳೆ ಕೇಳಿಬಂದ ಮಾತುಗಳು.

ವಯನಾಡು: ಯಾರಾದರೂ, ದಯವಿಟ್ಟು ಬಂದು ನಮ್ಮನ್ನು ಕಾಪಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನೌಶೀನ್‌ ಬದುಕಿದ್ದಾಳೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಅಕೆ ಕೆಸರಿನಡಿ ಸಿಕ್ಕಿಬಿದ್ದಿದ್ದಾಳೆ....ಇದು ಭೀಕರ ಭೂಕುಸಿತಕ್ಕೆ ತುತ್ತಾದ ವಯನಾಡಿನ ಚೂರಲ್‌ಮಲ ಗ್ರಾಮದ ಮಹಿಳೆಯೊಬ್ಬರು ತಮ್ಮ ಸಂಬಂಧಿಯೊಬ್ಬರಿಗೆ ಮೊಬೈಲ್‌ ಕರೆ ಮಾಡಿ ನೆರವಿಗಾಗಿ ಯಾಚಿಸಿದ ವೇಳೆ ಕೇಳಿಬಂದ ಮಾತುಗಳು. ಇಂಥದ್ದೇ ಹಲವಾರು ಆಡಿಯೋ ಕರೆಗಳು ಚೂರಲ್‌ಮಲ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಂದ ತಮ್ಮ ಆಪ್ತರಿಗೆ ಮಾಡಲ್ಪಟ್ಟಿದ್ದು ನೊಂದ ಜನರು ಅಸಹಾಯಕತೆಯಿಂದ ನೆರವಿಗಾಗಿ ಮೊರೆ ಇಟ್ಟ ಸಂದರ್ಭವನ್ನು ಜನರ ಮುಂದೆ ತೆರೆದಿಟ್ಟಿದೆ.ಇದೇ ರೀತಿಯ ಇನ್ನೊಂದು ದೂರವಾಣಿ ಕರೆಯಲ್ಲಿ ವ್ಯಕ್ತಿಯೊಬ್ಬರು, ಈಗಲೂ ಇಲ್ಲಿ ಭೂಮಿ ಕಂಪಿಸುತ್ತಿದೆ. ಮುಂದೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ. ನಮ್ಮ ಊರಿನಲ್ಲಿ ಭಾರೀ ಸದ್ದು ಕೇಳಿಬರುತ್ತಿದೆ. ಚೂರಲ್‌ಮಲ್‌ದಿಂದ ಹೊರಬರುವ ಯಾವುದೇ ಅವಕಾಶಗಳೂ ನಮಗೆ ಕಾಣಸಿಗುತ್ತಿಲ್ಲ ಎಂದು ಆತಂಕದಿಂದ ಹೇಳಿದ್ದಾರೆ.ಮತ್ತೊಂದು ದೂರವಾಣಿ ಕರೆಯನ್ನು ಮುಂಡಕ್ಕಾಯ್‌ ಗ್ರಾಮದಿಂದ ಮಾಡಲಾಗಿದ್ದು, ‘ಇಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭೂಕುಸಿತದ ಮಣ್ಣು ಮತ್ತು ಕೆಸರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರೆಲ್ಲಾ ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ. ಮೇಪ್ಪಡಿ ಪ್ರದೇಶದಿಂದ ಯಾರಾದರೂ ವಾಹನದಲ್ಲಿ ಬಂದರೆ ಇಲ್ಲಿ ನೂರಾರು ಜನರ ಪ್ರಾಣ ಉಳಿಸಬಹುದು’ ಎಂದು ರಕ್ಷಣೆಗೆ ಮೊರೆ ಇಟ್ಟ ಪ್ರಕರಣವೂ ಬೆಳಕಿಗೆ ಬಂದಿದೆ.

ಜೀವ ರಕ್ಷಣೆಗೆ ಮೊರೆ:ಇನ್ನೊಂದು ಭೀಕರ ದೃಶ್ಯದಲ್ಲಿ, ಭೂಕುಸಿತದ ವೇಳೆ ಕೆಸರಿನಲ್ಲಿ ಕೊಚ್ಚಿ ಹೋದ ವೃದ್ಧ ವ್ಯಕ್ತಿಯೊಬ್ಬರು ಅದು ಹೇಗೋ ದೊಡ್ಡ ಬಂಡೆಯೊಂದನ್ನು ಆಸರೆಯಾಗಿ ಹಿಡಿದುಕೊಂಡು ಜೀವ ಉಳಿಸಿಕೊಂಡ ರಕ್ಷಣೆಗೆ ಕಾದು ಕುಳಿತ ದೃಶ್ಯವೊಂದು ಎಲ್ಲರ ಮನ ಕಲುಕಿದೆ. ಆದರೆ ಘಟನಾ ಸ್ಥಳದಲ್ಲಿ ಭಾರೀ ಮಳೆ ಮತ್ತು ಕೆಸರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಕಾರಣ, ವೃದ್ಧ ಸಿಕ್ಕಿಬಿದ್ದಿರುವ ಸ್ಥಳಕ್ಕೆ ತೆರಳಲು ಇನ್ನೂ ರಕ್ಷಣಾ ಸಿಬ್ಬಂದಿ ಸಾಧ್ಯವಾಗಿಲ್ಲ. ಕೇವಲ ಈ ಘಟನೆಯೇ ದುರಂತಕ್ಕೆ ಸಿಕ್ಕಿಬಿದ್ದ ಎಲ್ಲಾ 4 ಗ್ರಾಮಗಳ ರಕ್ಷಣಾ ಕಾರ್ಯಚರಣೆ ಚಿತ್ರಣವನ್ನು ಮುಂದಿಟ್ಟಿದೆ.