ಸಾರಾಂಶ
ನವದೆಹಲಿ: ಹರ್ಯಾಣದಲ್ಲಿ ರೈತರನ್ನು ಪ್ರಚೋದಿಸುವ ಯತ್ನವನ್ನು ತಳ್ಳಿಹಾಕುವ ಮೂಲಕ ರೈತರು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ. ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿರೋಧಿ ಪಿತೂರಿಗಳಲ್ಲಿ ಕಾಂಗ್ರೆಸ್ ಭಾಗಿಯಾಗಿ ದೇಶ ವಿಭಜಿಸಲು ಯತ್ನಿಸುತ್ತಿದೆ. ಅಂಥ ಕಾಂಗ್ರೆಸ್‌ಗೆ ‘ದೇಶಭಕ್ತ’ ಹರ್ಯಾಣ ಜನರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹರ್ಯಾಣದಲ್ಲಿ ಹ್ಯಾಟ್ರಿಕ್ ಜಯದ ಕಾರಣ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ರಾತ್ರಿ ನಡೆದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತೀಯ ಸಮಾಜವನ್ನು ದುರ್ಬಲಗೊಳಿಸುವ ಮತ್ತು ಭಾರತದಲ್ಲಿ ಅರಾಜಕತೆಯನ್ನು ಹರಡುವ ಮೂಲಕ ದೇಶವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಬಯಸುತ್ತದೆ, ಅದಕ್ಕಾಗಿಯೇ ಅವರು ವಿವಿಧ ವರ್ಗಗಳನ್ನು ಪ್ರಚೋದಿಸುತ್ತಿದ್ದಾರೆ. ಅವರು ನಿರಂತರವಾಗಿ ಬೆಂಕಿಯನ್ನು ಹೊತ್ತಿಸಲು ಪ್ರಯತ್ನಿಸುತ್ತಿದ್ದಾರೆ. ರೈತರನ್ನು ಹೇಗೆ ಪ್ರಚೋದಿಸುವ ಪ್ರಯತ್ನಗಳು ನಡೆದಿವೆ ಎಂಬುದನ್ನು ದೇಶ ನೋಡಿದೆ, ಆದರೆ ಹರ್ಯಾಣದ ರೈತರು ಅವರಿಗೆ ನಾವು ದೇಶದ ಜೊತೆಗಿದ್ದೇವೆ, ಬಿಜೆಪಿಯೊಂದಿಗಿದ್ದೇವೆ ಎಂದು ತಕ್ಕ ಉತ್ತರ ನೀಡಿದ್ದಾರೆ’ ಎಂದರು.ದಾಖಲೆಯ 3ನೇ ಅವಧಿಗೆ ಬಿಜೆಪಿಗೆ ಹರ್ಯಾಣದಲ್ಲಿ ಸ್ಪಷ್ಟ ಬಹುಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, ‘1966ರಲ್ಲಿ ಸ್ಥಾಪನೆ ಆದ ರಾಜ್ಯದಲ್ಲಿ ಈವರೆಗೆ ಯಾರೂ 3 ಸಲ ಗೆದ್ದಿರಲಿಲ್ಲ. ಹರ್ಯಾಣದ ಜನರು ಕಮಲವನ್ನು ಅರಳಿಸುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ’ ಎಂದರು.ಅಗ್ನಿವೀರ ಬಗ್ಗೆ ದ್ವೇಷ ಏಕೆ?:ರೈತರು ಮತ್ತು ಅಗ್ನಿವೀರರು ಸೇರಿದಂತೆ ವಿವಿಧ ವಿಷಯಗಳಲ್ಲಿ ‘ದ್ವೇಷ’ ಹರಡಲು ಮತ್ತು ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಕುಟುಂಬ ದಲಿತ, ಹಿಂದುಳಿದ ವರ್ಗ ಮತ್ತು ಆದಿವಾಸಿಗಳನ್ನು ದ್ವೇಷಿಸುತ್ತದೆ. ಅವರಿಗೆ ಚುನಾವಣೆಯಲ್ಲಿ ಅವಕಾಶ ನೀಡಲು ನಿರಾಕರಿಸಿ ಅವರ ಗುರುತನ್ನು ಅವಮಾನಿಸಿದ್ದಾರೆ ಎಂದರು.
‘ದೇಶದ ಚುನಾವಣಾ ಆಯೋಗವಾಗಲಿ, ಪೊಲೀಸ್ ಆಗಿರಲಿ, ನ್ಯಾಯಾಂಗವಿರಲಿ, ಪ್ರತಿಯೊಂದು ಸಂಸ್ಥೆಗೂ ಕಳಂಕ ತರಲು ಕಾಂಗ್ರೆಸ್ ಬಯಸುತ್ತದೆ. ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಅವರು ಎಂತಹ ಅಬ್ಬರ ಸೃಷ್ಟಿಸಿದ್ದರು ಎಂಬುದು ನಿಮಗೆ ನೆನಪಿರಬಹುದು. ಚುನಾವಣೆಯ ಸಂದರ್ಭದಲ್ಲಿಯೂ ಈ ಜನರು ಮತ್ತು ಅವರ ನಗರ ನಕ್ಸಲೀಯ ಮಿತ್ರರು ಚುನಾವಣಾ ಆಯೋಗದ ವರ್ಚಸ್ಸಿಗೆ ಕಳಂಕ ತರಲು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಇಂದು ಕೂಡ ಅದನ್ನೇ ಮಾಡಿದ್ದಾರೆ ಎಂದು ಕಿಡಿಕಾರಿದರು.ಎನ್‌ಸಿಗೆ ಮೋದಿ ಅಭಿನಂದನೆ:
ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ಗೆ ಸ್ಪಷ್ಟವಾದ ಜನಾದೇಶವನ್ನು ನೀಡಿದ್ದನ್ನೂ ಪ್ರಸ್ತಾಪಿಸಿದ ಮೋದಿ, ಫಾರೂಖ್ ಅಬ್ದುಲ್ಲಾ ನೇತೃತ್ವದ ಪಕ್ಷಕ್ಕೆ ಅಭಿನಂದಿಸಿದರು.‘ಕಾಶ್ಮೀರದಲ್ಲಿ ಶಾಂತಿಯುತ ಚುನಾವಣೆಗಳು ನಡೆದವು. ಇದು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಜಯ. ಜಮ್ಮು ಮತ್ತು ಕಾಶ್ಮೀರದ ಜನರು ಎನ್‌ಸಿ ಮೈತ್ರಿಕೂಟಕ್ಕೆ ಜನಾದೇಶ ನೀಡಿದ್ದಾರೆ, ನಾನು ಅವರನ್ನೂ ಅಭಿನಂದಿಸುತ್ತೇನೆ. ಶೇಕಡಾವಾರು ಮತಗಳಿಕೆಯನ್ನು ಗಮನಿಸಿದರೆ, ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ’ ಎಂದರು.