ಸಾರಾಂಶ
ಇತ್ತೀಚೆಗೆ ಬಿಹಾರದಲ್ಲಿ ಯಶಸ್ವಿಯಾಗಿ ನಡೆಸಲಾದ ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ಇನ್ನೂ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ನವೆಂಬರ್ 4ರಿಂದ ಆರಂಭವಾಗಲಿರುವ ಈ ಪ್ರಕ್ರಿಯೆ
ನವದೆಹಲಿ : ಇತ್ತೀಚೆಗೆ ಬಿಹಾರದಲ್ಲಿ ಯಶಸ್ವಿಯಾಗಿ ನಡೆಸಲಾದ ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ಇನ್ನೂ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ನವೆಂಬರ್ 4ರಿಂದ ಆರಂಭವಾಗಲಿರುವ ಈ ಪ್ರಕ್ರಿಯೆ 2026ರ ಫೆ.7ರಂದು ಅಂತಿಮ ಪಟ್ಟಿ ಪ್ರಕಟಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಆಯೋಗ ಮಾಹಿತಿ ನೀಡಿದೆ. ಆದರೆ ಈ ಹಂತದಲ್ಲಿ ಕರ್ನಾಟಕದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯದು.
ಈ ನಡುವೆ ಆಯೋಗದ ಘೋಷಣೆಗೆ ಅಪಸ್ವರವೆತ್ತಿರುವ ಕಾಂಗ್ರೆಸ್, ‘ಇದರಿಂದ ಮತದಾರರಿಗಾಗಲಿ, ವಿಪಕ್ಷಗಳಿಗಾಗಲಿ ತೃಪ್ತಿಯಿಲ್ಲ. ಬಿಹಾರದಲ್ಲಿ ನಡೆದ ಎಸ್‌ಐಆರ್ ಬಗ್ಗೆ ಕೇಳಲಾದ ಪ್ರಶ್ನೆಗಳಿಗೇ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಅದನ್ನು ದೇಶವ್ಯಾಪಿ ವಿಸ್ತರಣೆ ಮಾಡುವ ಅವಶ್ಯಕತೆ ಏನಿತ್ತು. ಯಾವುದೇ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಬಾರದು’ ಎಂದು ಆಗ್ರಹಿಸಿವೆ. ಈ ನಡುವೆ ವಿಪಕ್ಷಗಳನ್ನು ಅತೃಪ್ತ ಆತ್ಮ ಎಂದು ಬಿಜೆಪಿ ವ್ಯಂಗ್ಯವಾಡಿದೆ.
2ನೇ ಸುತ್ತು ಆರಂಭ:
ಸೋಮವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ 4 ರಾಜ್ಯಗಳು ಸೇರಿದಂತೆ 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ 2ನೇ ಹಂತದ ಮತಪಟ್ಟಿ ಪರಿಷ್ಕರಣೆ ನಡೆಯಲಿದೆ. ಇದು ನ.4ರಂದು ಶುರುವಾಗಿ ಡಿ.4ರ ವರೆಗೆ ನಡೆಯಲಿದೆ. ಕರಡು ಮತಪಟ್ಟಿಯನ್ನು ಡಿ.9ರಂದು ಬಿಡುಗಡೆ ಮಾಡಲಾಗುವುದು ಹಾಗೂ ಅಂತಿಮ ಪಟ್ಟಿಯ ಅನಾವರಣ ಫೆ.7ರಂದು ಆಗಲಿದೆ. ಈ ಪ್ರಕ್ರಿಯೆಯು 51 ಕೋಟಿ ಜನರನ್ನು ಒಳಗೊಳ್ಳಲಿದ್ದು, ಯಾವೊಬ್ಬ ಅರ್ಹ ಮತದಾರನನ್ನೂ ಕೈಬಿಡುವುದಿಲ್ಲ ಹಾಗೂ ಅನರ್ಹನನ್ನು ಪಟ್ಟಿಯಲ್ಲಿರಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಜತೆಗೆ, ಇದು ಸ್ವತಂತ್ರ ಭಾರತದಲ್ಲಿ ನಡೆಯುತ್ತಿರುವ 9ನೇ ಪರಿಷ್ಕರಣೆಯಾಗಿದೆ. ಈ ಹಿಂದೆ ಇಂಥ ವಿಶೇಷ ಮತಪಟ್ಟಿಪರಿಷ್ಕರಣೆ ನಡೆದಿದ್ದು 2002-04ರಲ್ಲಿ ಎಂದು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಪರಿಷ್ಕರಣೆ?:
ಅಂಡಮಾನ್ ನಿಕೋಬಾರ್ ದ್ವೀಪ, ಲಕ್ಷದ್ವೀಪ, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಯಲಿದೆ. ಇವುಗಳ ಪೈಕಿ ತಮಿಳುನಾಡು, ಪುದುಚೇರಿ, ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲಿ ಪೌರತ್ವ ದೃಢೀಕರಣ ಅಭಿಯಾನ ನಡೆದಿರುವ ಕಾರಣ, ಅಲ್ಲಿನ ಪರಿಷ್ಕರಣೆ ಬಗ್ಗೆ ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಮೊದಲ ಹಂತದ ಪರಿಷ್ಕರಣೆ ಬಿಹಾರದಲ್ಲಿ ನಡೆದಿತ್ತು. ಅದರ ಮೊದಲ ಹಂತ ಜೂ.24ರಿಂದ ಜು.25ರ ವರೆಗೆ ಹಾಗೂ 2ನೇ ಹಂತ ಆ.1ರಿಂದ ಸೆ.1ರ ವರೆಗೆ ನಡೆದಿತ್ತು.
ಅಸ್ಸಾಂನಲ್ಲಿ ಈಗ್ಯಾಕಿಲ್ಲ?:
ಮುಂದಿನ ವರ್ಷ ಅಸ್ಸಾಂನಲ್ಲಿ ಚುನಾವಣೆ ನಡೆಯಲಿದ್ದರೂ, ಅಲ್ಲಿ ಎಸ್‌ಐಆರ್ ನಡೆಸುವ ಬಗ್ಗೆ ಏಕೆ ಘೋಷಿಸಿಲ್ಲ ಎಂಬ ಗೊಂದಲಕ್ಕೆ ಸ್ಪಷ್ಟನೆ ನೀಡಿರುವ ಆಯುಕ್ತರು, ‘ನಾಗರಿಕತ್ವ ಕಾಯ್ದೆಯಡಿ ಆ ರಾಜ್ಯಕ್ಕೆ ಪೌರತ್ವ ಕಾಯ್ದೆಯ ಪ್ರತ್ಯೇಕ ನಿಬಂಧನೆ ಅನ್ವಯಿಸುತ್ತದೆ. ಇಡೀ ದೇಶದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುವುದಾಗಿ ಘೋಷಿಸಲಾಗಿದೆಯಾದರೂ ಅದು ಅಸ್ಸಾಂಗೆ ಅನ್ವಯ ಆಗುವುದಿಲ್ಲ. ಆದ್ದರಿಂದ ಆ ಬಗ್ಗೆ ಪ್ರತ್ಯೇಕ ಘೋಷಣೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಆಕ್ಷೇಪ ಇಲ್ಲ:
‘ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಆಕ್ಷೇಪಿಸಿದ್ದ ಟಿಎಂಸಿಯಿಂದ ಯಾವುದೇ ವಿರೋಧವಿಲ್ಲ. ಆಯೋಗವು ತನ್ನ ಸಾಂವಿಧಾನಿಕ ಕರ್ತವ್ಯ ನಿಭಾಯಿಸುತ್ತಿದೆ. ಅತ್ತ ಬಿಹಾರದಲ್ಲೂ ಈ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ’ ಎಂದು ಜ್ಞಾನೇಶ್ ಕುಮಾರ್ ಹೇಳಿದರು.
ಕರ್ನಾಟಕದಲ್ಲಿ ಈಗ
ಪರಿಷ್ಕರಣೆ ಇಲ್ಲ 2ನೇ ಹಂತದ ಮತಪಟ್ಟಿ ಪರಿಷ್ಕರಣೆಯಲ್ಲಿ ಕರ್ನಾಟಕವನ್ನು ಸೇರಿಸಲಾಗಿಲ್ಲ. ಇದಕ್ಕೆ ಕಾರಣ, ಕರ್ನಾಟಕದಲ್ಲಿ ಮುಂದಿನ ವರ್ಷ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿಕ್ಕಿದೆ. ಸ್ಥಳೀಯ ಸಂಸ್ಥೆ ನಡೆಯಲಿರುವ ರಾಜ್ಯಗಳಲ್ಲಿ ಸದ್ಯಕ್ಕೆ ಪ್ರಕ್ರಿಯೆ ಇಲ್ಲ ಎಂದು ಆಯೋಗ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.
;Resize=(128,128))
;Resize=(128,128))
;Resize=(128,128))