ಸಾರಾಂಶ
ಮತಗಳ್ಳತನ ಮಾಡುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಮತದಾರರ ಪಟ್ಟಿಯಲ್ಲಿ ಸುಳ್ಳು ಹೆಸರು ಇರುವುದನ್ನು ಕಾಂಗ್ರೆಸ್ ಸಾಕ್ಷ್ಯ ಸಮೇತ ಜನರ ಮುಂದಿಟ್ಟಿದೆ. ಒಬ್ಬ ಮತದಾರ ಹಲವು ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಿರುವುದು ಪತ್ತೆಯಾಗಿದೆ. ಇದರ ವಿಡಿಯೋ ದಾಖಲೆ ಬಿಡುಗಡೆ ಮಾಡಲು ಚುನಾವಣಾ ಆಯೋಗ ಮೀನಮೇಷ ಎಣಿಸುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಬಿಜೆಪಿ ಹಾಗೂ ಚುನಾವಣಾ ಆಯೋಗ ಶಾಮೀಲಾಗಿ ಮತ ಕಳ್ಳತನದಲ್ಲಿ ತೊಡಗಿವೆ ಎಂದು ಆರೋಪಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿ ಆಕ್ರೋಶ ವ್ಯಕ್ಯಪಡಿಸಿದರು.ಪಟ್ಟಣದ ಐದು ದೀಪದ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ವೋಟ್ ಚೋರಿ ವಿರುದ್ಧ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಪ್ರಜಾಪ್ರಭುತ್ವ ಹಾಗೂ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮತಗಳ್ಳತನ ಮಾಡುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಮತದಾರರ ಪಟ್ಟಿಯಲ್ಲಿ ಸುಳ್ಳು ಹೆಸರು ಇರುವುದನ್ನು ಕಾಂಗ್ರೆಸ್ ಸಾಕ್ಷ್ಯ ಸಮೇತ ಜನರ ಮುಂದಿಟ್ಟಿದೆ. ಒಬ್ಬ ಮತದಾರ ಹಲವು ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಿರುವುದು ಪತ್ತೆಯಾಗಿದೆ. ಇದರ ವಿಡಿಯೋ ದಾಖಲೆ ಬಿಡುಗಡೆ ಮಾಡಲು ಚುನಾವಣಾ ಆಯೋಗ ಮೀನಮೇಷ ಎಣಿಸುತ್ತಿದೆ ಎಂದು ಆಪಾದಿಸಿದರು.ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿದ್ದ ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಕೈಗೊಂಬೆಯಾಗಿದೆ. ಹೊರ ರಾಜ್ಯದ ಮತದಾರರು ಮತದಾರರ ಪಟ್ಟಿಯಲ್ಲಿದ್ದರೂ ಆಯೋಗ ಕಣ್ಮುಚ್ಚಿ ಕುಳಿತಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿರುವ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ಬಿಟ್ಟು ಬಿಜೆಪಿಯ ಮುಖವಾಣಿಯಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ಈ ವೇಳೆ ಕಾಂಗ್ರೆಸ್ ಟೌನ್ ಅಧ್ಯಕ್ಷ ಕೆ.ಉಮಾಶಂಕರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಹುಚ್ಚೇಗೌಡ, ಸದಸ್ಯರಾದ ಜಯಲಕ್ಷ್ಮಮ್ಮ, ಮಹ್ಮದ್ ಹನೀಫ್ (ಪಾಪು), ಟಿಎಪಿಸಿಎಂಎಸ್ ನಿರ್ದೇಶಕ ಟಿ.ಎಸ್.ಹಾಳಯ್ಯ, ಎಸ್.ಸಿ, ಎಸ್.ಟಿ ವಿಭಾಗದ ಅಧ್ಯಕ್ಷ ಕೆ.ಬಿ.ರಾಮು, ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಮುಖಂಡರಾದ ಚಿಕ್ಕಾಡೆ ಮಹೇಶ್, ಪೊಲೀಸ್ ಸತ್ಯಪ್ಪ, ಚಿಕ್ಕಮರಳಿ ಧರ್ಮಣ್ಣ, ಬಿ.ಜೆ.ಸ್ವಾಮಿ, ಅಂತನಹಳ್ಳಿ ಪ್ರವೀಣ್, ಎ.ಜಿ.ಬಸವರಾಜು, ಹರಳಹಳ್ಳಿ ರಾಜೇಶ್ (ಲೋಕೇಶ್), ಎಸ್.ಟಿ.ದೊಡ್ಡವೆಂಕಟಯ್ಯ, ಸಿ.ಎಸ್.ದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.