ಸಾರಾಂಶ
ನವದೆಹಲಿ : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂ.4ರಂದು ಷೇರುಸೂಚ್ಯಂಕ ಸೆನ್ಸೆಕ್ಸ್ 4000 ಅಂಕಗಳಿಗೂ ಹೆಚ್ಚು ಕುಸಿತ ಅನುಭವಿಸಿದ ವಿಚಾರ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಚುನಾವಣೆ ಫಲಿತಾಂಶದ ದಿನ ಸೆನ್ಸೆಕ್ಸ್ ಕುಸಿದು, ಹೂಡಿಕೆದಾರರು ಲಕ್ಷಾಂತರ ಕೋಟಿ ರು. ಕಳೆದುಕೊಂಡ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಪ್ರಕಟವಾಗುತ್ತದ್ದಂತೆ ಷೇರು ಪೇಟೆ ಏರಿಕೆಯಾಗಿತ್ತು. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಕುಸಿತ ಅನುಭವಿಸಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಹೂಡಿಕೆದಾರರು 20 ಲಕ್ಷ ಕೋಟಿ ರು. ನಷ್ಟ ಅನುಭವಿಸಿದ್ದಾರೆ. ಇದರಿಂದಾಗಿ ಷೇರುಪೇಟೆ ನಿಯಂತ್ರಣ ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ ಎಂದು ವಕೀಲ ವಿಶಾಲ್ ತಿವಾರಿ ಎಂಬುವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಅದರ ಬೆನ್ನಲ್ಲೇ ಸೆನ್ಸೆಕ್ಸ್ 2507 ಅಂಕ ಏರಿಕೆ ದಾಖಲಿಸಿತ್ತು. ಆದರೆ ಜೂ.4ರಂದು ಫಲಿತಾಂಶ ಪ್ರಕಟವಾಗಿ ಅತಂತ್ರ ಲೋಕಸಭೆ ಸೃಷ್ಟಿಯಾದಾಗ ಸೆನ್ಸೆಕ್ಸ್ 4390 ಅಂಕ ಕುಸಿತ ಅನುಭವಿಸಿತ್ತು. ಇದು ನಾಲ್ಕು ವರ್ಷಗಳಲ್ಲೇ ಸೆನ್ಸೆಕ್ಸ್‌ನ ಅತ್ಯಧಿಕ ಕುಸಿತವಾಗಿತ್ತು. ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು.