ಸಾರಾಂಶ
ರಾಮರಥ ಯಾತ್ರೆಯ ಮೂಲಕ ಬಿಜೆಪಿಯನ್ನು ಕೇವಲ 2 ಸಂಸತ್ ಸ್ಥಾನದಿಂದ ಬಹುಮತದ ಅಂಚಿಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಂದಿದೆ
ನವದೆಹಲಿ: ರಾಮರಥ ಯಾತ್ರೆಯ ಮೂಲಕ ಬಿಜೆಪಿಯನ್ನು ಕೇವಲ 2 ಸಂಸತ್ ಸ್ಥಾನದಿಂದ ಬಹುಮತದ ಅಂಚಿಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಂದಿದೆ. ಈ ಮೂಲಕ ಭಾರತ ರತ್ನ ಪಡೆಯುತ್ತಿರುವ 50ನೇ ಸಾಧಕರಾಗಿ ಅಡ್ವಾಣಿ ಹೊರಹೊಮ್ಮಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ದೇಶದ ಜನತೆಗೆ ಹಾಗೂ ಪ್ರಶಸ್ತಿಯನ್ನು ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 96 ಹರೆಯದ ನಾಯಕನಿಗೆ ಇದರ ಬೆನ್ನಲ್ಲೇ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಈ ನಡುವೆಯೇ ರಾಷ್ಟ್ರಪತಿ ಭವನವು, ’ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇರು ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸಲು ಉತ್ಸುಕರಾಗಿದ್ದಾರೆ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಕಳೆದ ತಿಂಗಳಷ್ಟೇ ಬಿಹಾರದ ಮೇರು ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಡ್ವಾಣಿಗೆ ಗೌರವ ಸಂದಿದ್ದು ಗಮನಾರ್ಹ.
ಅಲ್ಲದೆ, ಈಗ ರಾಮರಥ ಯಾತ್ರೆಯ ಮೂಲಕ ರಾಮಮಂದಿರ ಕಟ್ಟುವ ಸಂಕಲ್ಪ ಮಾಡಿದ್ದ ಹಿರಿಯ ನಾಯಕನಿಗೆ ರಾಮಮಂದಿರ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿರುವುದು ವಿಶೇಷ.
ಮೋದಿ ಹರ್ಷ: ಅಡ್ವಾಣಿಗೆ ಭಾರತ ರತ್ನ ಪ್ರಕಟಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಹಿರಿಯ ನಾಯಕ ಅಡ್ವಾಣಿ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸುವುದು ನನ್ನ ಪಾಲಿಗೆ ಅತ್ಯಂತ ಭಾವುಕ ಕ್ಷಣವಾಗಿದೆ.
ಅವರು ತಮ್ಮ ಸಮಸ್ತ ಜೀವನವನ್ನು ದೇಶದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದಾರೆ. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಮಾಡಿದ ಸಾಧನೆಗಳು ಅತ್ಯಂತ ಐತಿಹಾಸಿಕವಾಗಿವೆ’ ಎಂದಿದ್ದಾರೆ.
‘ಸುಮಾರು 7 ದಶಕಗಳ ಅವರ ರಾಜಕೀಯ ಜೀವನ ಅತ್ಯಂತ ಘನತೆಯಿಂದ ಮತ್ತು ಪಾರದರ್ಶಕತೆಯಿಂದ ಕೂಡಿತ್ತು. ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರು ಸಂಸತ್ತಿನಲ್ಲಿ ಮತ್ತು ಸಂಪುಟ ಸಭೆಗಳಲ್ಲಿ ವ್ಯಕ್ತಪಡಿಸುತ್ತಿದ್ದ ನವೀನ ಆಲೋಚನೆಗಳು ದೂರದೃಷ್ಟಿಯುಳ್ಳದ್ದಾಗಿತ್ತು.
ಅವರು ರಾಷ್ಟ್ರದ ಐಕ್ಯತೆ ಮತ್ತು ಸಂಸ್ಕೃತಿಯ ಪುನರುತ್ಥಾನಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ್ದಾರೆ. ಅಂತಹ ಮೇರು ನಾಯಕನೊಂದಿಗೆ ಹಲವು ಬಾರಿ ಚರ್ಚಿಸಿ ಹಲವು ವಿಷಯಗಳಲ್ಲಿ ಮಾರ್ಗದರ್ಶನ ಪಡೆದುಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.