ರಾಷ್ಟ್ರೀಯತೆಗೆ ವಿಜಯಕಾಂತ್‌ ಗೌರವ: ಸ್ಟಾಲಿನ್‌ಗೆ ಮೋದಿ ಟಾಂಗ್‌

| Published : Jan 03 2024, 01:45 AM IST

ರಾಷ್ಟ್ರೀಯತೆಗೆ ವಿಜಯಕಾಂತ್‌ ಗೌರವ: ಸ್ಟಾಲಿನ್‌ಗೆ ಮೋದಿ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದರೂ ರಾಷ್ಟ್ರೀಯ ಹಿತಕ್ಕೆ ವಿಜಯಕಾಂತ್‌ ಆದ್ಯತೆ ನೀಡುತ್ತಿದ್ದರು. ಅವರು ರಾಜಕಾರಣದಲ್ಲೂ ಕ್ಯಾಪ್ಟನ್‌ ಆಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣನೆ ಮಾಡಿದ್ದಾರೆ. ಇದೇ ವೇಳೆ ತಿರುಚಿರಾಪಳ್ಳಿ ಏರ್‌ಪೋರ್ಟ್‌ ಸೇರಿ ವಿವಿಧ ಯೋಜನೆಗೆ ಮೋದಿ ಚಾಲನೆ ನೀಡಿದರು.

ತಿರುಚಿರಾಪಳ್ಳಿ (ತಮಿಳುನಾಡು): ಕೆಲ ದಿನಗಳ ಹಿಂದಷ್ಟೇ ನಿಧನರಾದ ಡಿಎಂಡಿಕೆ ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್‌ಕಾಂತ್‌ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಗೌರವ ಕೊಡುವ ವ್ಯಕ್ತಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಮೂಲಕ ತಮಿಳು ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಸದಾ ಟೀಕಿಸುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಅವರ ಎದುರೇ ಪರೋಕ್ಷ ಟಾಂಗ್‌ ನೀಡಿದ್ದಾರೆ.ತಿರುಚಿರಾಪಳ್ಳಿ ಏರ್‌ಪೋರ್ಟ್‌ ಸೇರಿ ತಮಿಳುನಾಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ‘ಕ್ಯಾಪ್ಟನ್‌ ಎಂದೇ ಚಿತ್ರಗಳ ಮೂಲಕ ಖ್ಯಾತ ರ ವಿಜಯ್‌ಕಾಂತ್‌ ಅವರು ಚಲನಚಿತ್ರದ ರೀತಿಯಲ್ಲೇ ರಾಜಕಾರಣದಲ್ಲೂ ಸಹ ‘ಕ್ಯಾಪ್ಟನ್‌’ ಆಗಿದ್ದರು. ಅವರು ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದರೂ ಸಹ ರಾಷ್ಟ್ರೀಯ ಭಾವೈಕ್ಯತೆಯನ್ನು ಗೌರವಿಸುವ ನಿಟ್ಟಿನಲ್ಲಿ ರಾಷ್ಟ್ರದ ಸಮಗ್ರ ಅಭಿವೃದ್ಧಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಪ್ರೋತ್ಸಾಹ ನೀಡಿ ಬೆಂಬಲಿಸುತ್ತಿದ್ದರು. ಇತ್ತೀಚೆಗೆ ಅವರು ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅದೇ ವೇದಿಕೆಯಲ್ಲಿ ಸ್ಟಾಲಿನ್‌ ಕೂಡ ಇದ್ದರು. ಸ್ಟಾಲಿನ್‌ ಅವರು ನೀಟ್‌, ತಮಿಳರ ಹಿತಾಸಕ್ತಿ, ಹಿಂದಿ ಭಾಷೆ ಹೇರಿಕೆ ಸೇರಿ ಅನೇಕ ವಿಷಯಗಳ ಬಗ್ಗೆ ಆಗಾಗ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.ವಿಜಯ್‌ಕಾಂತ್‌ ಅವರು ಕ್ಯಾಪ್ಟನ್‌ ಪ್ರಭಾಕರನ್‌ ಚಿತ್ರದ ಮೂಲಕ ಖ್ಯಾತಿ ಗಳಿಸಿದ ಕಾರಣ ತಮಿಳುನಾಡಿನಲ್ಲಿ ಕ್ಯಾಪ್ಟನ್‌ ಎಂದೇ ಖ್ಯಾತರಾಗಿದ್ದು, ಕಳೆದ ಡಿ.28ರಂದು ನಿಧನರಾದರು.