ರಾಮಮಂದಿರ ರಾಮರಾಜ್ಯ ನಿರ್ಮಾಣಕ್ಕೆ ಮುನ್ನುಡಿ: ಬಿಜೆಪಿ ನಿರ್ಣಯ

| Published : Feb 19 2024, 01:30 AM IST / Updated: Feb 19 2024, 08:25 AM IST

ಸಾರಾಂಶ

ಪ್ರಧಾನಿ ಮೋದಿಗೆ ಬಿಜೆಪಿ ಅಭಿನಂದನಾ ನಿರ್ಣಯ ಮಂಡಿಸಿದ್ದು, ಅಯೋಧ್ಯೆಯಲ್ಲಿ ಉದ್ಘಾಟನೆಯಾದ ರಾಮಮಂದಿರವು ದೇಶದಲ್ಲಿ ಮುಂದಿನ 1 ಸಾವಿರ ವರ್ಷಗಳ ಕಾಲ ರಾಮರಾಜ್ಯ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಹೊಸ ಕಾಲಚಕ್ರ ಆರಂಭವಾಗಿದ್ದು, ಮುಂದಿನ ಸಾವಿರ ವರ್ಷಗಳವರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಕನಸಾಗಿದ್ದ ರಾಮರಾಜ್ಯ ನೆಲೆಸುವ ರಾಯಭಾರಿಯಾಗಿ ಕಂಗೊಳಿಸಲಿದೆ ಎಂಬ ನಿರ್ಣಯವನ್ನು ಬಿಜೆಪಿ ತನ್ನ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ತೆಗೆದುಕೊಂಡಿದೆ. 

ರಾಮಮಂದಿರ ನಿರ್ಮಾಣ ರಾಷ್ಟ್ರದಲ್ಲಿ ರಾಷ್ಟ್ರೀಯ ಪ್ರಜ್ಞೆ ಉದ್ದೀಪನಗೊಳ್ಳಲು ಪ್ರೇರಕ ಶಕ್ತಿಯಾಗಿದೆ. ಅಲ್ಲದೆ ಇದು ವಿಕಸಿತ ಭಾರತ ಸಂಕಲ್ಪವನ್ನು ಈಡೇರಿಸುವ ಗುರಿಯನ್ನೂ ಹೊಂದಿದೆ. 

ಈ ಪವಿತ್ರ ಕಾರ್ಯವನ್ನು ನೆರವೇರಿಸಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುವುದಾಗಿಯೂ ನಿರ್ಣಯ ತೆಗೆದುಕೊಳ್ಳಲಾಗಿದೆ. 

ಸಂವಿಧಾನದಲ್ಲಿ ರಾಮ: ಇದೇ ವೇಳೆ ನಿರ್ಣಯದಲ್ಲಿ ಸಂವಿಧಾನದ ಮೂಲ ಪ್ರತಿಯಲ್ಲಿ ಶ್ರೀರಾಮನಿರುವುದನ್ನು ಉಲ್ಲೇಖಿಸುತ್ತಾ, ಮೂಲ ಸಂವಿಧಾನ ಪ್ರತಿಯ ಮೂಲಭೂತ ಹಕ್ಕುಗಳ ಪುಟದ ಮೇಲ್ಭಾಗದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ಚಿತ್ರವನ್ನು ಚಿತ್ರಿಸಲಾಗಿದೆ. 

ಹೀಗೆ ಮೂಲಭೂತ ಹಕ್ಕುಗಳನ್ನು ರಚಿಸಲು ಮತ್ತು ಸಂರಕ್ಷಿಸಲು ಶ್ರೀರಾಮನೇ ಮೂಲ ಪ್ರೇರಣೆಯಾಗಿದ್ದಾನೆ ಎಂದು ತಿಳಿಸಿದೆ.