ಚರಣಾಮೃತ ಸೇವಿಸಿ 11 ದಿನದ ಉಪವಾಸ ಮುರಿದ ನರೇಂದ್ರ ಮೋದಿ

| Published : Jan 23 2024, 01:49 AM IST / Updated: Jan 23 2024, 11:34 AM IST

ಚರಣಾಮೃತ ಸೇವಿಸಿ 11 ದಿನದ ಉಪವಾಸ ಮುರಿದ ನರೇಂದ್ರ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿಗೆ ಚರಣಾಮೃತ ತಿನ್ನಿಸಿದ ಗೋವಿಂದ ಗಿರಿ ಮಹಾರಾಜ್‌ ಉಪವಾಸವನ್ನು ಅಂತ್ಯಗೊಳಿಸಿದರು. ವ್ರತಾಚರಣೆ ವೇಳೆ ಕೇವಲ ಹಣ್ಣು, ಹಾಲು ಸೇವಿಸುತ್ತಾ, ನಿತ್ಯ ಚಾಪೆಯ ಮೇಲೆ ಶಯನ, ವಿವಿಧ ದೇಗುಲಗಳಿಗೆ ಭೇಟಿ ನೀಡುವ ಮೂಲಕ ವಿಶೇಷ ಅನುಷ್ಠಾನ ಕೈಗೊಂಡಿದ್ದರು.

ಅಯೋಧ್ಯೆ: ರಾಮಜನ್ಮಭೂಮಿಯ ರಾಮಮಂದಿರದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ 11 ದಿನಗಳ ಉಪವಾಸವನ್ನು ಚರಣಾಮೃತ ಸೇವಿಸುವ ಮೂಲಕ ಮುರಿದರು. ಪ್ರತಿಷ್ಠಾಪನಾ ಸಮಾರಂಭದ ನಂತರ ಮೋದಿ ಅವರು ಭಾಷಣದ ವೇದಿಕೆಗೆ ಆಗಮಿಸಿದರು. 

ಆಗ ಸಂತ ಗೋವಿಂದ ದೇವ ಗಿರಿ ಮಹಾರಾಜರು ಅವರಿಗೆ ‘ಚರಣಾಮೃತ’ (ವಿಧಿಗಳಿಗೆ ಬಳಸುವ ಹಾಲಿನೊಂದಿಗೆ ಮಾಡಿದ ಸಿಹಿ ಪಾನೀಯ ಅಥವಾ ಪಂಚಾಮೃತ) ತಿನ್ನಿಸಿದರು. ಅಲ್ಲಿಗೆ ಮೋದಿ ಅವರ ಉಪವಾಸ ಅಂತ್ಯವಾಯಿತು.

ಮೋದಿ ಅವರು ತಮ್ಮ 11 ದಿನಗಳ ಆಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹಾಗೂ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಜ.12ಕ್ಕೆ ರಾಮಲಲ್ಲಾ ಪ್ರತಿಷ್ಠಾಪನೆಗೆ 11 ದಿನ ಬಾಕಿ ಉಳಿದಿರುವಾಗ ಮೋದಿ ಅವರು ವ್ರತಾಚರಣೆ ಆರಂಭಿಸಿದ್ದರು. ನಿತ್ಯ ಅವರು ಹಣ್ಣು ಹಾಲು ಮಾತ್ರ ಸೇವಿಸುತ್ತಿದ್ದರು. 

ನಿತ್ಯ ಚಾಪೆಯ ಮೇಲೆ ಮಲಗುತ್ತಿದ್ದರು ಹಾಗೂ ಬ್ರಾಹ್ಮಣರಿಗೆ ವಿವಿಧ ದಾನ ಧರ್ಮಾರಿಗಳನ್ನು ಮಾಡುತ್ತಿದ್ದರು. 

ಈ 11 ದಿನದ ಉದ್ದಕ್ಕೂ ಅವರು ರಾಮನ ಐತಿಹ್ಯದ ದೇಶದ ವಿವಿಧ ಮಂದಿರಗಳಿಗೆ ಭೇಟಿ ನೀಡಿ ಪೂಜೆ-ಪ್ರಾರ್ಥನೆ ನಡೆಸಿದರು ಹಾಗೂ ಪುಣ್ಯಸ್ನಾನ ಮಾಡಿದರು. ದೇಗುಲ ಸ್ವಚ್ಛತೆಯಲ್ಲೂ ಅವರು ಭಾಗಿಯಾಗಿದ್ದರು.

3 ದಿನ ವ್ರತ ಸಾಕು ಎಂದಿದ್ದೆವು, ಮೋದಿ 11 ದಿನ ಮಾಡಿದರು
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ 3 ದಿನ ವ್ರತಾಚರಣೆ ಮಾಡಿ ಎಂದು ಹೇಳಲಾಗಿತ್ತು. ಆದರೆ ಅವರು 11 ದಿನ ಕಠಿಣ ವ್ರತಾಚರಣೆ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದರು ಎಂದು ರಾಮಮಂದಿರ ಟ್ರಸ್ಟ್‌ ಸದಸ್ಯ ಗೋವಿಂದಗಿರಿ ಮಹಾರಾಜರು ಪ್ರಶಂಸಿಸಿದರು.

ರಾಮಮಂದಿರ ಪ್ರಾಣಪ್ರತಿಷ್ಠೆ ಬಳಿಕ ನಡೆದ ಸಮಾರಂಭದಲ್ಲಿ ಮೋದಿ ಸಮ್ಮುಖದಲ್ಲೇ ಭಾಷಣ ಮಾಡಿದ ಮಹಾರಾಜರು, ‘ಪ್ರಾಣಪ್ರತಿಷ್ಠೆಯ ಯಜಮಾನತ್ವ ವಹಿಸಲಿರುವ ಕಾರಣ ಮೋದಿ ಅವರಿಗೆ 3 ದಿನ ವ್ರತ ಮಾಡಿ ಎಂದು ಸಾಧು ಸಂತರು ಸಲಹೆ ನೀಡಿದ್ದರು. 

ಆದರೆ 11 ದಿನ ಅವರು ವ್ರತ ಮಾಡಿದರು. ಈ ವೇಳೆ ಅವರು ಊಟ ಮಾಡದೇ ಕೇವಲ ಎಳನೀರು ಕುಡಿದರುಯ. ನೆಲದ ಮೇಲೆ ಮಲಗುತ್ತಿದ್ದರು. ದೈವೀ ಆಶೀರ್ವಾದ ಹಾಗೂ ಮಾರ್ಗದರ್ಶನ ಮೂಲಕ ಮಾತ್ರ ಇದು ಸಾಧ್ಯ’ ಎಂದು ಕೊಂಡಾಡಿದರು.‘

ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಇಡೀ ಜಗತ್ತು ಬೆಳಗುತ್ತದೆ. ಇದು ಕೇವಲ ವಿಗ್ರಹದ ಪ್ರತಿಷ್ಠಾಪನೆ ಅಲ್ಲ. ಆದರೆ ಇದು ಭಾರತದ ಗೌರವ ಮತ್ತು ಆತ್ಮ ವಿಶ್ವಾಸವನ್ನು ಸಂಕೇತಿಸುತ್ತದೆ’ ಎಂದು ಮಹಾರಾಜರು ಹೇಳಿದರು.