ಗುಜರಾತ್‌ನ ಗಿರ್‌ ವನ್ಯಜೀವಿ ರಕ್ಷಿತಾರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ

| N/A | Published : Mar 04 2025, 12:32 AM IST / Updated: Mar 04 2025, 07:01 AM IST

ಸಾರಾಂಶ

ವಿಶ್ವ ವನ್ಯಜೀವಿಗಳ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗುಜರಾತ್‌ನ ಜುನಾಗಢದಲ್ಲಿರುವ ಗಿರ್‌ ವನ್ಯಜೀವಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದರು. ಈ ವೇಳೆ ಏಷ್ಯಾದ ಸಿಂಹಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು.

ಸಾಸನ್‌(ಗುಜರಾತ್‌): ವಿಶ್ವ ವನ್ಯಜೀವಿಗಳ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗುಜರಾತ್‌ನ ಜುನಾಗಢದಲ್ಲಿರುವ ಗಿರ್‌ ವನ್ಯಜೀವಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದರು. ಈ ವೇಳೆ ಏಷ್ಯಾದ ಸಿಂಹಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅ‍ವರು, ಇಂದು ನಾನು ಏಷ್ಯಾದ ಸಿಂಹಗಳ ಆವಾಸಸ್ಥಾನವಾದ ಗಿರ್‌ ವನ್ಯಜೀವಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದೆ. ಈ ಭೇಟಿಯು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗಿರ್‌ ವನ್ಯಜೀವಿಧಾಮಕ್ಕಾಗಿ ನಾವು ಮಾಡಿದ ಕೆಲಸಗಳ ನೆನಪು ಹಸಿರಾಗಿಸಿತು. ಕಳೆದ ಕೆಲ ವರ್ಷಗಳ ಸಮುಗ್ರ ಪ್ರಯತ್ನದ ಫಲವಾಗಿ ಗಿರ್‌ನಲ್ಲಿ ಏಷ್ಯಾದ ಸಿಂಹಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಸಿಂಹಗಳ ಆವಾಸಸ್ಥಾನ ರಕ್ಷಣೆಯಲ್ಲಿ ಈ ಪ್ರದೇಶದ ಸುತ್ತಮುತ್ತ ವಾಸಿಸುವ ಗುಡ್ಡಗಾಡು ಜನ ಹಾಗೂ ಮಹಿಳೆಯರೂ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್‌ ಮತ್ತಿತರ ಸಚಿವರು, ಅರಣ್ಯಾಧಿಕಾರಿಗಳು ಮೋದಿ ಅವರ ಜತೆಗಿದ್ದರು. ನಂತರ ಮೋದಿ ಅವರು ಸಾಸನ್‌ಗಿರ್‌ನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯಲ್ಲಿ ಪಾಲ್ಗೊಂಡರು.

ಏಷ್ಯಾಟಿಕ್ ಅಥವಾ ಏಷ್ಯಾದ ಸಿಂಹಗಳು ಭಾರತದಲ್ಲಿ ಗುಜರಾತ್‌ನ ಗಿರ್‌ನಲ್ಲಷ್ಟೇ ಕಾಣಸಿಗುತ್ತವೆ. ಇಲ್ಲಿ ಕೇಂದ್ರ ಸರ್ಕಾರವು 2900 ಎಕ್ರೆಗಿಂತ ಹೆಚ್ಚಿನ ಪ್ರದೇಶವನ್ನು ಪ್ರಾಜೆಕ್ಟ್‌ ಲಯನ್‌ಗಾಗಿ ಮೀಸಲಿಟ್ಟಿದೆ.