ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಯಜಮಾನತ್ವ: 11 ದಿನ ಕೇವಲ ಎಳನೀರು ಸೇವಿಸಿ ಪ್ರಧಾನಿ ಉಪವಾಸ!

| Published : Jan 19 2024, 01:48 AM IST / Updated: Jan 19 2024, 11:52 AM IST

Prime Minister Narendra Modi
ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಯಜಮಾನತ್ವ: 11 ದಿನ ಕೇವಲ ಎಳನೀರು ಸೇವಿಸಿ ಪ್ರಧಾನಿ ಉಪವಾಸ!
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ‘ಯಜಮಾನತ್ವ’ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದಕ್ಕಾಗಿ ಶಾಸ್ತ್ರೋಕ್ತವಾದ 11 ದಿನಗಳ ಕಠಿಣ ವ್ರತಾಚರಣೆಯಲ್ಲಿ ತೊಡಗಿದ್ದಾರೆ.

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ‘ಯಜಮಾನತ್ವ’ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದಕ್ಕಾಗಿ ಶಾಸ್ತ್ರೋಕ್ತವಾದ 11 ದಿನಗಳ ಕಠಿಣ ವ್ರತಾಚರಣೆಯಲ್ಲಿ ತೊಡಗಿದ್ದಾರೆ.

ಪ್ರಾಣಪ್ರತಿಷ್ಠೆಗಾಗಿ ಮೋದಿ ‘ಯಮ ನಿಯಮ’ ವ್ರತಾಚರಣೆಯನ್ನು ಮಾಡುತ್ತಿದ್ದು, ಅದರ ಅಂಗವಾಗಿ ಜ.12ರಿಂದ ನೆಲದ ಮೇಲೆ ಮಲಗುತ್ತಾ, ಕೇವಲ ಎಳನೀರು ಸೇವಿಸಿ ಉಪವಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀರಾಮನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ಹಾಗೂ ಪವಿತ್ರ ಸಂದರ್ಭದಲ್ಲಿ ಪಾಲ್ಗೊಳ್ಳಲು ನಾನು ಅದೃಷ್ಟ ಮಾಡಿದ್ದೇನೆ. ಇದಕ್ಕಾಗಿ ದೇವರೇ ನನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ಭಾವಿಸಿದ್ದೇನೆ. ಹೀಗಾಗಿ ಶಾಸ್ತ್ರಬದ್ಧವಾಗಿ ವ್ರತಾಚರಣೆ ಮಾಡುತ್ತೇನೆ ಎಂದು ಜ.12ರಂದೇ ಮೋದಿ ಪ್ರಕಟಿಸಿದ್ದರು. 

ಆದರೆ ಅದು ಯಾವ ವ್ರತ ಎಂಬುದನ್ನು ಹೇಳಿರಲಿಲ್ಲ. ಪ್ರಧಾನಿ ಕಚೇರಿಯ ಮೂಲಗಳ ಪ್ರಕಾರ ಅವರು ‘ಯಮ ನಿಯಮ’ ವ್ರತದಲ್ಲಿ ತೊಡಗಿದ್ದಾರೆ. ಅದರ ಅಂಗವಾಗಿ ಕೇವಲ ಎಳನೀರು ಬಿಟ್ಟರೆ ಇನ್ನಾವುದೇ ಆಹಾರ ಸೇವಿಸುತ್ತಿಲ್ಲ. 

ನಿತ್ಯ ರಾತ್ರಿ ನೆಲದ ಮೇಲೆ ಮಲಗುತ್ತಿದ್ದಾರೆ ಎಂದು ತಿಳಿದುಬಂದಿದೆ.‘ಯಮ ನಿಯಮ’ ವ್ರತದಲ್ಲಿ ಹಲವಾರು ಕ್ರಮಗಳನ್ನು ಹೇಳಲಾಗಿದೆ. ಯೋಗ, ಧ್ಯಾನ ಹಾಗೂ ಬೇರೆ ಬೇರೆ ಕ್ರಿಯೆಗಳಲ್ಲಿ ಶಿಸ್ತು ಪಾಲಿಸುವುದು ಪ್ರಮುಖವಾಗಿದೆ. 

ಮೋದಿ ಪ್ರತಿದಿನ ಸೂರ್ಯೋದಯಕ್ಕೂ ಮೊದಲೇ ಏಳುವುದು, ಧ್ಯಾನ ಮಾಡುವುದು, ಸಾತ್ವಿಕ ಆಹಾರ ಮಾತ್ರ ಸೇವಿಸುವುದು ಮುಂತಾದ ನಿಯಮಗಳನ್ನು ಸಾಮಾನ್ಯ ದಿನಗಳಲ್ಲೂ ಪಾಲಿಸುತ್ತಾರೆ. 

ಈಗ ಶ್ರೀರಾಮನ ಪ್ರಾಣ ಪ್ರತಿಷ್ಠೆಗಾಗಿ ಉಪವಾಸ ಹಾಗೂ ನೆಲದ ಮೇಲೆ ಮಲಗುವ ವ್ರತದಲ್ಲೂ ತೊಡಗಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

ರಾಮಾಯಣಕ್ಕೆ ಸಂಬಂಧಿಸಿದ 6 ಅಂಚೆಚೀಟಿ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಮಾಯಣಕ್ಕೆ ಸಂಬಂಧಿಸಿದ ಚಿತ್ರವಿರುವ ಆರು ಅಂಚೆಚೀಟಿಗಳು, ವಿಶ್ವದ ವಿವಿಧ ದೇಶಗಳು ಹೊರತಂದಿರುವ ರಾಮನಿಗೆ ಸಂಬಂಧಪಟ್ಟ ಅಂಚೆಚೀಟಿಗಳ ಸಂಗ್ರಹವುಳ್ಳ ಪುಸ್ತಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಲೋಕಾರ್ಪಣೆಗೊಳಿಸಿದ್ದಾರೆ. 

ಈ ವೇಳೆ ಮಾತನಾಡಿದ ಪ್ರಧಾನಿ, ‘ಅಂಚೆಚೀಟಿಗಳು ಕೇವಲ ಕಲಾಕೃತಿಗಳಲ್ಲ. ಅವು ನಮ್ಮ ಮಹಾಕಾವ್ಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಿರುಚಿತ್ರಗಳಾಗಿವೆ’ ಎಂದು ಬಣ್ಣಿಸಿದ್ದಾರೆ.

ಇಂದು ಬಿಡುಗಡೆಯಾದ ಆರು ಅಂಚೆಚೀಟಿಗಳು ರಾಮಮಂದಿರ, ಗಣೇಶ, ಹನುಮಂತ, ಜಟಾಯು, ಕೇವತರಾಜ ಮತ್ತು ಮಾತೆ ಶಬರಿಯ ಚಿತ್ರಗಳನ್ನು ಒಳಗೊಂಡಿವೆ. 

ಹಾಗೆಯೇ 48 ಪುಟಗಳಿರುವ ರಾಮನ ಕುರಿತ ಅಂಚೆಚೀಟಿಗಳ ಸಂಗ್ರಹ ಪುಸ್ತಕವನ್ನು ಪಂಚಭೂತಗಳನ್ನು ಆಸ್ವಾದಿಸುವ ರೀತಿ ಆಕರ್ಷಕ ಪುಟವಿನ್ಯಾಸ ಮಾಡಲಾಗಿದೆ. 

ಇದರಲ್ಲಿ ಅಮೆರಿಕ, ಸಿಂಗಾಪುರ, ಕಾಂಬೊಡಿಯಾ ಮುಂತಾದ 20 ದೇಶಗಳಲ್ಲಿ ಬಿಡುಗಡೆಯಾಗಿರುವ ರಾಮನ ಅಂಚೆಚೀಟಿಗಳ ಚಿತ್ರಗಳನ್ನು ಒಳಗೊಂಡಿವೆ.

ಜ.22ಕ್ಕೆ ದೀಪ ಹಚ್ಚಿ, ಬಡವರಿಗೆ ಆಹಾರ ವಿತರಿಸಿ: ಮೋದಿ ಕರೆ

ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ಬಡವರಿಗೆ ಸಹಾಯ ಮಾಡುವ ಮೂಲಕ ಅಯೋಧ್ಯೆ ಶ್ರೀರಾಮಮಂದಿರವನ್ನು ದೀಪಾವಳಿಯಂತೆ ಆಚರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಕರೆ ನೀಡಿದ್ದಾರೆ.

‘ಪ್ರಾಣಪ್ರತಿಷ್ಠಾಪನೆಯನ್ನು ನಿಮ್ಮ ನಿಮ್ಮ ಮನೆಗಳಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿಯಂತೆ ಆಚರಿಸಿ. ಜೊತೆಗೆ ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಿ. 

ಅಲ್ಲದೆ 22ರ ನಂತರ ತಮ್ಮ ಕ್ಷೇತ್ರದ ಜನರೊಂದಿಗೆ ರೈಲಿನಲ್ಲೇ ಅಯೋಧ್ಯೆಗೆ ಆಗಮಿಸಿ ಶ್ರೀರಾಮನ ದರ್ಶನ ಪಡೆಯಿರಿ’ ಎಂದು ಸಲಹೆ ನೀಡಿದರು. 

ಇತ್ತೀಚೆಗಷ್ಟೇ ಬಿಜೆಪಿಯು ಎಲ್ಲ ಕ್ಷೇತ್ರಗಳಿಂದ ಜನರನ್ನು ಅಯೋಧ್ಯೆಗೆ ರೈಲಿನ ಮೂಲಕ ಪ್ರಯಾಣ ಮಾಡಲು ಸಹಾಯ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿತ್ತು.

ರಾಮನ ಸ್ವಾಗತಕ್ಕೆ ಅಯೋಧ್ಯೆಗೆ ಟೀವಿಯ ರಾಮ, ಸೀತೆ, ಲಕ್ಷ್ಮಣ!

ರಮಾನಂದ ಸಾಗರ್‌ ನಿರ್ದೇಶನದ ರಾಮಾಯಣ ಧಾರವಾಹಿಯಲ್ಲಿ ನಟಿಸಿದ್ದ ಕಲಾವಿದರು ಅಯೋಧ್ಯೆಗೆ ಅಗಮಿಸಿದ್ದಾರೆ. ಅಲ್ಲಿನ ಬೀದಿಗಳಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಓಡಾಟ ನಡೆಸುತ್ತಿರುವ ದೃಶ್ಯ ವೈರಲ್‌ ಆಗಿದೆ. 

ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳಾಗಿದ್ದ ಅರುಣ್‌ ಗೋವಿಲ್‌, ದೀಪಿಕಾ ಚಿಕ್ಲಿಯಾ ಮತ್ತು ಸುನಿಲ್‌ ಲಾಹಿರಿ, ರಾಮಮಂದಿರದಲ್ಲಿ ರಾಮನ ಸ್ವಾಗತಕ್ಕೆ ಅಯೋಧ್ಯೆಗೆ ಆಗಮಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಆಹ್ವಾನದ ಮೇರೆಗೆ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಬಂದಿರುವ ಮೂವರೂ ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ಸುತ್ತಾಡಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೆಲವು ಕಡೆ ಮೂವರನ್ನು ನಡುವೆ ನಿಲ್ಲಿಸಿ ಸುತ್ತಲೂ ಮಹಿಳೆಯರು ನೃತ್ಯ ಮಾಡಿರುವ ದೃಶ್ಯಗಳು ಕೂಡಾ ಕಂಡುಬಂದಿವೆ.

ಮಂದಿರ ಉದ್ಘಾಟನೆ ದಿನ ಕೇಂದ್ರ ಕಚೇರಿಗೆ ಅರ್ಧ ದಿನ ರಜೆ ಪ್ರಕಟ

ಜ.22ರ ಸೋಮವಾರದಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂದು ದೇಶಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನಗಳ ಕಾಲ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. 

ಎಲ್ಲ ನೌಕರರೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಲು ಅನುವು ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಈ ಬಗ್ಗೆ ಗುರುವಾರ ಆದೇಶ ಹೊರಡಿಸಿರುವ ಕೇಂದ್ರ ಸಿಬ್ಬಂದಿ ಸಚಿವಾಲಯ ‘ಜ.22ರಂದು ಅಯೋಧ್ಯೆಯ ರಾಮ್‌ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. 

ನೌಕರರು ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು ಅಂದು ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಮಧ್ಯಾಹ್ನ 2.30ರ ವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ‘ಈ ಬಗ್ಗೆ ದೇಶಾದ್ಯಂತ ಭಾರಿ ಸಾರ್ವಜನಿಕ ಬೇಡಿಕೆ ಇತ್ತು. ಅಗಾಧ ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದರು.