ಬೆಂಗಳೂರಿನ ಐಟಿ ಕಾರಿಡಾರ್‌ ಎಲೆಕ್ಟ್ರಾನಿಕ್‌ ಸಿಟಿಯನ್ನು ಸಂಪರ್ಕಿಸುವ, ಚಾಲಕ ರಹಿತ ರೈಲು ಓಡಾಡಲಿರುವ ‘ನಮ್ಮ ಮೆಟ್ರೋ’ ಹಳದಿ ಮಾರ್ಗದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಆ.10ರಂದು ನೆರವರಿಸಲಿದ್ದಾರೆ.  

ಬೆಂಗಳೂರು : ಬೆಂಗಳೂರಿನ ಐಟಿ ಕಾರಿಡಾರ್‌ ಎಲೆಕ್ಟ್ರಾನಿಕ್‌ ಸಿಟಿಯನ್ನು ಸಂಪರ್ಕಿಸುವ, ಚಾಲಕ ರಹಿತ ರೈಲು ಓಡಾಡಲಿರುವ ‘ನಮ್ಮ ಮೆಟ್ರೋ’ ಹಳದಿ ಮಾರ್ಗದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಆ.10ರಂದು ನೆರವರಿಸಲಿದ್ದಾರೆ. ಇದೇ ವೇಳೆ ಅ‍ವರು 15,611 ಕೋಟಿ ರು. ವೆಚ್ಚದ 44.65 ಕಿ.ಮೀ. ಉದ್ದದ ಮೆಟ್ರೋ ಮೂರನೇ ಹಂತದ ಯೋಜನೆಗೂ ಶಂಕು ಸ್ಥಾಪನೆ ಮಾಡಲಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್‌ ಖಟ್ಟರ್‌ ‘ಎಕ್ಸ್‌’ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿರುವ ಮೂರನೇ ಹಂತದ ‘ಕಿತ್ತಳೆ’ ಬಣ್ಣದ ಮಾರ್ಗ ಜೆ.ಪಿ.ನಗರ ನಾಲ್ಕನೇ ಹಂತದಿಂದ ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕಿಸಲಿದೆ. ಇನ್ನು ಅವರು ಉದ್ಘಾಟಿಸಲಿರುವ ಹಳದಿ ಮಾರ್ಗ ₹5,056.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ 19.15 ಕಿ.ಮೀ. ಸಂಪರ್ಕಿಸಲಿದೆ. 16 ನಿಲ್ದಾಣ ಹೊಂದಿರುವ ಈ ಮಾರ್ಗದಲ್ಲಿ ಸದ್ಯ ಮೂರು ರೈಲುಗಳ ಮೂಲಕ ಸಂಚಾರ ಆರಂಭಿಸಲು ಮೆಟ್ರೋ ಸಜ್ಜಾಗಿದೆ. ನಿತ್ಯ 3.5 ಲಕ್ಷ ಮಂದಿ ಈ ಮಾರ್ಗದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಂದಾಜಿಸಿದೆ. ಈ ಹೊಸ ಮಾರ್ಗದಿಂದ ಬೆಂಗಳೂರಿನ ಟೆಕಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

ಚಾಲಕ ರಹಿತ ರೈಲು:

ಈವರೆಗೆ ನಮ್ಮ ಮೆಟ್ರೋದಲ್ಲಿ ರೈಲುಗಳು ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ಸಿಗ್ನಲಿಂಗ್‌ ತಂತ್ರಜ್ಞಾನದಲ್ಲಿ ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ (ಕಮ್ಯುನಿಕೇಶನ್‌ ಬೇಸ್ಡ್ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಬಳಸಲಾಗಿದೆ. ಚೀನಾದಿಂದ ಚಾಲಕ ರಹಿತ 1 ಪ್ರೊಟೋಟೈಪ್‌(ಮಾದರಿ) ರೈಲು ಬಂದಿದೆ. ಅದೇ ಮಾದರಿ ನೋಡಿಕೊಂಡು ಕೋಲ್ಕತಾದ ತೀತಾಘಡ್‌ ರೈಲ್‌ ಸಿಸ್ಟಂ ಲಿ. 14 ರೈಲುಗಳನ್ನು ಈ ಮಾರ್ಗಕ್ಕೆ ಒದಗಿಸುತ್ತಿದೆ. ಇದು ಚಾಲಕ ರಹಿತ ರೈಲಾದರೂ ಅರಂಭದಲ್ಲಿ ಚಾಲಕ ಸಹಿತವಾಗಿ ಸಂಚರಿಸಿ ಬಳಿಕ ಚಾಲಕರಹಿತವಾಗಿ ರೈಲು ಓಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.