ಸಾರಾಂಶ
ನಗರದ ಐಟಿ-ಬಿಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಬಹು ನಿರೀಕ್ಷಿತ ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ದಕ್ಷಿಣ ವೃತ್ತದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ದೊರಕಿದೆ. ಇದರೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ.
ಬೆಂಗಳೂರು : ನಗರದ ಐಟಿ-ಬಿಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಬಹು ನಿರೀಕ್ಷಿತ ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ದಕ್ಷಿಣ ವೃತ್ತದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ದೊರಕಿದೆ. ಇದರೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ.
ಇತ್ತೀಚೆಗೆ ಸುರಕ್ಷತಾ ಆಯುಕ್ತರಾದ ಎ.ಎಂ.ಚೌಧರಿ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿತ್ತು. ಕೆಲವು ಸಾಮಾನ್ಯ ಷರತ್ತುಗಳೊಂದಿಗೆ ಕಾರ್ಯಾಚರಣೆ ಆರಂಭಿಸಲು ಗುರುವಾರ ಒಪ್ಪಿಗೆ ನೀಡಲಾಗಿದೆ. ಬಿಎಂಆರ್‌ಸಿಎಲ್ ಷರತ್ತುಗಳನ್ನು ಅಧ್ಯಯನ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಒಟ್ಟು 19.15 ಕಿ.ಮೀ ಉದ್ದದ ಹಳದಿ ಮಾರ್ಗದಲ್ಲಿ 20 ರಿಂದ 25 ನಿಮಿಷಕ್ಕೆ ಒಂದರಂತೆ 3 ರೈಲುಗಳು ಸಂಚರಿಸಲಿವೆ. ಆರ್.ವಿ.ರಸ್ತೆಯಿಂದ ಹೊಸೂರು ರಸ್ತೆಯ ಬೊಮ್ಮಸಂದ್ರವರೆಗಿನ ಈ ಮಾರ್ಗವೂ ಸಿಲ್ಕ್‌ಬೋರ್ಡ್, ಎಲೆಕ್ಟ್ರಾನಿಕ್ ಸಿಟಿಯ ಮೂಲಕ ಹಾದು ಹೋಗುತ್ತದೆ. ಒಟ್ಟು 16 ನಿಲ್ದಾಣಗಳಿವೆ.
ಆ.15ಕ್ಕೆ ಮೋದಿ ಹಸಿರು ನಿಶಾನೆ?:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆಂದು ತಿಳಿದು ಬಂದಿದೆ. ಪ್ರಯಾಣಿಕ ಸಂಚಾರ ಆರಂಭಿಸಲು ಉದ್ಘಾಟನೆ ದಿನಾಂಕ ನಿಗದಿಪಡಿಸಲು ಕೋರಿ ನಿಯಮಾನುಸಾರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದಿನಾಂಕ ನಿಗದಿಯಾದ ದಿನದಿಂದಲೇ ಸಂಚಾರ ಆರಂಭಿಸಲು ಸಜ್ಜಾಗಿದ್ದೇವೆ. ಆ.15ಕ್ಕೆ ಸಂಚಾರ ಕಾರ್ಯಾರಂಭಿಸುವ ಉದ್ದೇಶವಿದೆ. ಅಂತಿಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನಾಂಕ ಅಂತಿಮಗೊಳಿಸುತ್ತವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಹಾಲಿ ಮೂರು ರೈಲುಗಳು ಸಂಚಾರಕ್ಕೆ ಸಿದ್ಧವಾಗಿವೆ. ಇನ್ನೊಂದು ರೈಲು ಶೀಘ್ರದಲ್ಲೇ ಬೆಂಗಳೂರು ತಲುಪಲಿದೆ. ಅದನ್ನು ಕೂಡ ನಿಯಮಾನುಸಾರ ಪರೀಕ್ಷೆಗೆ ಒಳಪಡಿಸಿ ಸಂಚಾರಕ್ಕೆ ಬಿಡಲಾಗುತ್ತದೆ. ಆರಂಭದಲ್ಲಿ 20-25 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸುತ್ತವೆ. ಮುಂದಿನ ವರ್ಷ ಪೂರ್ಣ ಪ್ರಮಾಣದ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.