ಸಾರಾಂಶ
ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಇರುವ ಏಕೈಕ ಮಾರ್ಗವಾಗಿದೆ. ಹಾಗಾಗಿ ದೀರ್ಘಕಾಲದಿಂದ ಬಾಕಿ ಇರುವ ಹಳದಿ ಮಾರ್ಗವನ್ನು ಕೂಡಲೇ ಉದ್ಘಾಟಿಸಿ ಜನರಿಗೆ ಮುಕ್ತಗೊಳಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ನವದೆಹಲಿ : ಬೆಂಗಳೂರು ಭಾರತದ ಆರ್ಥಿಕ ಎಂಜಿನ್ ಆಗಿದ್ದು, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಇರುವ ಏಕೈಕ ಮಾರ್ಗವಾಗಿದೆ. ಹಾಗಾಗಿ ದೀರ್ಘಕಾಲದಿಂದ ಬಾಕಿ ಇರುವ ಹಳದಿ ಮಾರ್ಗವನ್ನು ಕೂಡಲೇ ಉದ್ಘಾಟಿಸಿ ಜನರಿಗೆ ಮುಕ್ತಗೊಳಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಶೂನ್ಯ ಅವಧಿಯಲ್ಲಿ ಹಳದಿ ಮಾರ್ಗ ಮೆಟ್ರೋ ಲೋಕಾರ್ಪಣೆ ವಿಳಂಬದ ಕುರಿತು ಧ್ವನಿ ಎತ್ತಿದ ಅವರು, ರಾಜ್ಯ ರಾಜಧಾನಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಮೆಟ್ರೋ. ಆದರೆ, ಕಾಮಗಾರಿ ಮುಗಿದು ಹಲವು ದಿನವಾದರೂ ಹಳದಿ ಮಾರ್ಗ ಮೆಟ್ರೋ ಲೋಕಾರ್ಪಣೆ ಮಾಡಿಲ್ಲ. ಈ ಮೆಟ್ರೋ ಸೇವೆ ಎಲೆಕ್ಟ್ರಾನಿಕ್ ಸಿಟಿ ಸುತ್ತಲೂ ಲಭ್ಯವಾಗಲಿದ್ದು, ಇದು ಆರಂಭಗೊಂಡರೇ ಪ್ರತಿನಿತ್ಯ 8 ಲಕ್ಷ ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಹಳದಿ ಮಾರ್ಗವನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಶುಲ್ಕ ಹೆಚ್ಚಳ ವರದಿ ಬಹಿರಂಗಗೊಳಿಸಿ:
ಬಿಎಂಆರ್‌ಸಿಎಲ್ ಕಳೆದ 4 ತಿಂಗಳ ಹಿಂದೆ ಶೇ.130ರಷ್ಟು ಟಿಕೆಟ್ ದರವನ್ನು ಹೆಚ್ಚಿಸಿತ್ತು. ಆದರೆ, ಈತನಕ ಶುಲ್ಕ ನಿಗದಿ ಸಮಿತಿಯ ವರದಿಯನ್ನು ಬಿಎಂಆರ್‌ಸಿಎಲ್ ಬಹಿರಂಗಗೊಳಿಸಿಲ್ಲ. ಇದರ ಪರಿಣಾಮ ಬಳಕೆದಾರರ ಸಂಖ್ಯೆ ಕಡಿಮೆ ಆಗಿದೆ. ಹಾಗಾಗಿ ಈ ಕೂಡಲೇ ಸಮಿತಿಯ ವರದಿಯನ್ನು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಬೇಕು. ಅಲ್ಲದೇ ಸಚಿವಾಲಯದ ಬಳಿ ಬಾಕಿ ಇರುವ ರೆಡ್‌ಲೈನ್ ಡಿಪಿಆರ್‌ಗೆ ಕೂಡಲೇ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.