ವಿಶ್ವದ ಅತಿ ದೊಡ್ಡ ಧಾನ್ಯ ಸಂಗ್ರಹ ಸ್ಕೀಂ

| Published : Feb 25 2024, 01:46 AM IST / Updated: Feb 25 2024, 10:19 AM IST

ದಾಸ್ತಾನು

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಗೆ ಶನಿವಾರ ಚಾಲನೆ ನೀಡಿದ್ದಾರೆ.

ಪಿಟಿಐ ನವದೆಹಲಿ

ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಗೆ ಶನಿವಾರ ಚಾಲನೆ ನೀಡಿದ್ದಾರೆ. ಇದು 1.25 ಲಕ್ಷ ಕೋಟಿ ರು.ಗಳ ಹೂಡಿಕೆಯನ್ನು ಒಳಗೊಂಡಿದ್ದು, ದೇಶಾದ್ಯಂತ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಸಾವಿರಾರು ಗೋದಾಮುಗಳನ್ನು ತೆರೆಯುವ ಗುರಿ ಹೊಂದಿದೆ. 

ಯೋಜನೆಯಡಿ ಮುಂದಿನ 5 ವರ್ಷದಲ್ಲಿ 700 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯವನ್ನು ರಚಿಸುವ ಮಹದೋದ್ದೇಶ ಹೊಂದಲಾಗಿದೆ. ಯೋಜನೆಯ ಮೊದಲ ಭಾಗವಾಗಿ ಶನಿವಾರ ಮೋದಿ ಅವರು 11 ರಾಜ್ಯಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ 11 ಗೋದಾಮುಗಳನ್ನು ಉದ್ಘಾಟಿಸಿದರು. 

ಇದೇ ವೇಳೆ, ಅವರು 500 ಕೃಷಿ ಸಹಕಾರ ಸಂಘಗಳಲ್ಲಿ ಗೋಡೌನ್‌ಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅಡಿಪಾಯ ಹಾಕಿದರು.ಈ ವೇಳೆ ಮಾತನಾಡಿದ ಅವರು, ‘ಇಂದು ನಾವು ನಮ್ಮ ರೈತರಿಗಾಗಿ ವಿಶ್ವದ ಅತಿದೊಡ್ಡ ಶೇಖರಣಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ.

ಈ ಯೋಜನೆ ಅಡಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಸಾವಿರಾರು ಗೋದಾಮುಗಳನ್ನು ನಿರ್ಮಿಸುವ ಮೂಲಕ 700 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯ ಸ್ಥಾಪಿಸಲಾಗುವುದು’ ಎಂದು ಘೋಷಿಸಿದರು.‘ದೇಶದಲ್ಲಿ ಶೇಖರಣಾ ಮೂಲಸೌಕರ್ಯಗಳ ಕೊರತೆಯಿಂದಾಗಿ ರೈತರು ಭಾರಿ ನಷ್ಟವನ್ನು ಅನುಭವಿಸಬೇಕಾಗಿದೆ. 

ಹಿಂದಿನ ಸರ್ಕಾರಗಳು ಈ ಸಮಸ್ಯೆಯ ಬಗ್ಗೆ ಸರಿಯಾದ ಗಮನ ಹರಿಸಲಿಲ್ಲ. ಆದರೆ ಇಂದು ಕೃಷಿ ಸಹಕಾರ ಸಂಘಗಳ ಮೂಲಕ ಈ ಸಮಸ್ಯೆ ಪರಿಹರಿಸಲಾಗುತ್ತಿದೆ. ಯೋಜನೆಗೆ 1.25 ಲಕ್ಷ ಕೋಟಿ ರು. ವೆಚ್ಚವಾಗಲಿದೆ’ ಎಂದು ಪ್ರಧಾನಿ ಹೇಳಿದರು.

‘ಬೃಹತ್ ಶೇಖರಣಾ ಘಟಕ ಸ್ಥಾಪಿಸುವ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸಾಂಸ್ಥಿಕ ಸಾಲವನ್ನು ಪಡೆಯಲು ಮತ್ತು ಮಾರುಕಟ್ಟೆ ಬೆಲೆ ಏರಿದಾಗ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಇದೇ ವೇಳೆ, ಖಾದ್ಯ ತೈಲಗಳು ಮತ್ತು ಬೇಳೆಕಾಳುಗಳು ಮತ್ತು ರಸಗೊಬ್ಬರಗಳು ಸೇರಿದಂತೆ ಆಹಾರ ಪದಾರ್ಥಗಳ ಆಮದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಸಹಕಾರಿ ಸಂಸ್ಥೆಗಳಿಗೆ ಅವರು ಕೋರಿದರು.

‘ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ಸಹಕಾರ ಸಂಸ್ಥೆಗಳು ಭಾರತ ಆಮದು ಮಾಡಿಕೊಳ್ಳುವ ವಸ್ತುಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅವುಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಅಥವಾ ತಯಾರಿಸಲು ಕ್ರಮವನ್ನು ಯೋಜಿಸಬೇಕು’ ಎಂದು ಸಲಹೆ ನೀಡಿದರು.

ದೇಶಕ್ಕೂ ಲಾಭ, ರೈತರಿಗೂ ಲಾಭ

ದೇಶವನ್ನು ಆಹಾರದಲ್ಲಿ ಸ್ವಾವಲಂಬಿ ಮಾಡಲು ಭಾರಿ ಪ್ರಮಾಣದಲ್ಲಿ ಗೋದಾಮುಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಈ ಗೋದಾಮುಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಡಬಹುದು. ಆಗ ಅವರಿಗೆ ಆಗುವ ನಷ್ಟ ತಪ್ಪುತ್ತದೆ. ಉತ್ತಮ ಬೆಲೆ ಬಂದಾಗ ಬೆಳೆ ಮಾರಾಟ ಮಾಡಿ ಹಣ ಗಳಿಸಬಹುದು. - ನರೇಂದ್ರ ಮೋದಿ, ಪ್ರಧಾನ ಮಂತ್ರಿ