ಸಾರಾಂಶ
ನವದೆಹಲಿ : ಭಾರತ ಆರೋಗ್ಯವಂತ ದೇಶವಾಗಲು ಬೊಜ್ಜಿನ ವಿರುದ್ಧ ಆಂದೋಲನ ಮುಖ್ಯ ಎಂದು ಮನ್ ಕೀ ಬಾತ್‌ನಲ್ಲಿ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸೇರಿ 10 ಮಂದಿಯನ್ನು ಆಂದೋಲನಕ್ಕೆ ರಾಯಭಾರಿಯನ್ನಾಗಿ ಮಾಡಿದ್ದಾರೆ.
ಸೋಮವಾರ ಈ ಬಗ್ಗೆ ಹೇಳಿಕೆ ನಿಡಿರುವ ಅವರು, ಸುಧಾ ಮೂರ್ತಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉದ್ಯಮಿ ಆನಂದ್ ಮಹೀಂದ್ರಾ, ನಟ-ರಾಜಕಾರಣಿ ದಿನೇಶ್ ಲಾಲ್, ಒಲಿಂಪಿಕ್ ಪದಕ ವಿಜೇತರಾದ ಮನು ಭಾಕರ್ ಮತ್ತು ಮೀರಾಬಾಯಿ ಚಾನು, ನಟರಾದ ಮೋಹನ್ ಲಾಲ್ ಮತ್ತು ಆರ್. ಮಾಧವನ್, ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.
ಅಲ್ಲದೆ, ‘ನಮ್ಮ ಚಳುವಳಿ ದೊಡ್ಡದಾಗಲು ಪ್ರತಿ ನಾಮಾಂಕಿತರೂ ತಲಾ 10 ಜನರನ್ನು ನಾಮನಿರ್ದೇಶನ ಮಾಡುವಂತೆ ನಾನು ವಿನಂತಿಸುತ್ತೇನೆ’ ಎಂದು ಕೋರಿದ್ದಾರೆ.
ಸುಧಾರಿಂದ 10 ಮಂದಿ ನಾಮಾಂಕಿತ:
ಇದಕ್ಕೆ ಕೃತಜ್ಞತೆ ಸಲ್ಲಿಸಿರುವ ಸುಧಾ ಮೂರ್ತಿ, ಮೋದಿ ಕೋರಿಕೆಯಂತೆ ತಾವೂ 10 ಮಂದಿಯನ್ನು ಹೆಸರಿಸಿದ್ದಾರೆ. ಇವರಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿ.ಟಿ. ಉಷಾ, ಕ್ಯೂರ್‌ಫಿಟ್ ಮತ್ತು ಮಿಂತ್ರಾ ಸಂಸ್ಥಾಪಕ ಮುಖೇಶ್ ಬನ್ಸಲ್, ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ, ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಲೇಖಕ ಅಮಿಶ್ ತ್ರಿಪಾಠಿ ಅವರನ್ನು ಹೆಸರಿಸಿದ್ದಾರೆ.
ನಿಲೇಕಣಿ ಹಾಗೂ ಆನಂದ ಮಹೀಂದ್ರಾ ಕೂಡ ಕೂಡ 10 ಉದ್ಯಮಿಗಳನ್ನು ಹೆಸರಿಸಿದ್ದಾರೆ.
ನಾಮನಿರ್ದೇಶನಕ್ಕೆ ಸಂತಸ ವ್ಯಕ್ತಪಡಿಸಿರುವ ಒಮರ್ ಅಬ್ದುಲ್ಲಾ, ‘ಮೋದಿ ಪ್ರಾರಂಭಿಸಿದ ಬೊಜ್ಜು ವಿರುದ್ಧದ ಅಭಿಯಾನದಲ್ಲಿ ಭಾಗವಹಿಸಲು ಸಂತೋಷವಾಗುತ್ತದೆ’ ಎಂದಿದ್ದಾರೆ.