ಭಯೋತ್ಪಾದನೆ ಹಣಕಾಸು ಆರೋಪದಲ್ಲಿ ಜೈಲಿನಲ್ಲಿದ್ದ ರಶೀದ್ ಬಿಡುಗಡೆ: 'ನಯಾ ಕಾಶ್ಮೀರ' ವಿರುದ್ಧ ಹೋರಾಟದ ಎಚ್ಚರಿಕೆ

| Published : Sep 12 2024, 01:48 AM IST / Updated: Sep 12 2024, 05:18 AM IST

ಸಾರಾಂಶ

ಭಯೋತ್ಪಾದನೆ ಹಣಕಾಸು ಆರೋಪದಲ್ಲಿ ಜೈಲಿನಲ್ಲಿದ್ದ ಕಾಶ್ಮೀರದ ಸಂಸದ ರಶೀದ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕಾಶ್ಮೀರಕ್ಕೆ ಮರಳಲಿರುವ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 'ನಯಾ ಕಾಶ್ಮೀರ' ವಿರುದ್ಧ ಹೋರಾಡುವುದಾಗಿ ಅವರು ಹೇಳಿದ್ದಾರೆ.

ನವದೆಹಲಿ: ಭಯೋತ್ಪಾದನೆಗೆ ಹಣ ಹೂಡಿಕೆ ಮಾಡಿದ ಆರೋಪದ ಮೇಲೆ 2019ರಿಂದ ಜೈಲಿನಲ್ಲಿದ್ದ ಕಾಶ್ಮೀರದ ಬಾರಾಮುಲ್ಲಾ ಸಂಸದ ಎಂಜಿನಿಯರ್‌ ರಶೀದ್‌ ಅವರು ಜಾಮೀನಿನ ಮೇಲೆ ಬುಧವಾರ ತಿಹಾರ್‌ ಜೈಲಿನಿಂದ ಹೊರಬಂದರು.ಕಾಶ್ಮೀರಕ್ಕೆ ತೆರಳಲಿರುವ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ.ಅ.2ರವರೆ ಅವರಿಗೆ ದಿಲ್ಲಿ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ಬಿಡುಗಡೆ ಬಳಿಕ ಮಾತನಾಡಿದ ಅವರು, ’ನಾನು ಕಾಶ್ಮೀರದ ಜನರನ್ನು ಒಡೆಯುವುದಕ್ಕಲ್ಲ, ಒಂದುಗೂಡಿಸಲು ಹೋರಾಡುತ್ತೇನೆ. ನನಗೆ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಬೇಕು, ಕಾಶ್ಮೀರದ ಜನರು ಕಲ್ಲು ಹೊಡೆಯುವವರಲ್ಲ ಎಂದು ಸಾಬೀತು ಮಾಡಬೇಕು’ ಎಂದರು.‘ಪ್ರಧಾನಿ ನರೇಂದ್ರ ಮೋದಿ ಅವರ ‘ನಯಾ ಕಾಶ್ಮೀರ’ ವಿರುದ್ಧ ಹೋರಾಡುತ್ತೇನೆ. ಜಮ್ಮು ಕಾಶ್ಮೀರವನ್ನು ಪಿಡಿಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ತಮ್ಮ ದುರಾಡಳಿತದಿಂದ ಹಾಳು ಮಾಡಿವೆ’ ಎಂದು ಕಿಡಿಕಾರಿದರು.

==

ವೈದ್ಯೆ ರೇಪ್‌: ಸಂಧಾನ ಮಾತುಕತೆ ನೇರಪ್ರಸಾರಕ್ಕೆ ವೈದ್ಯರ ಪಟ್ಟು

ಕೋಲ್ಕತಾ: ಇಲ್ಲಿನ ಆರ್‌.ಜಿ. ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ರೇಪ್ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವೆ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ವೈದ್ಯರು ಮಾತುಕತೆಗೆ ಕೋರಿ ಪತ್ರ ಬರೆದಿದ್ದು, ಸರ್ಕಾರವೂ ಇದಕ್ಕೆ ಸ್ಪಂದಿಸಿ ಮಾತುಕತೆಗೆ ಇ-ಮೇಲ್‌ ಮೂಲಕ ಆಹ್ವಾನಿಸಿದೆ. ಮಾತುಕತೆಗೆ 12-15 ಸದಸ್ಯರ ನಿಯೋಗ ಕರೆತನ್ನಿ ಎಂದಿದೆ.ಆದರೆ ವೈದ್ಯರು, ಈ ಮಾತುಕತೆ ಗೌಪ್ಯವಾಗಿರದೇ ಮಾಧ್ಯಮಗಳಲ್ಲಿ ನೇರ ಪ್ರಸಾರ ಆಗಬೇಕು ಎಂದು ಕೋರಿದ್ದಾರೆ. ಬುಧವಾರ ಸಂಜೆಯೇ ಮಾತುಕತೆ ನಡೆಯಬೇಕಿತ್ತು. ಆದರೆ ವೈದ್ಯರ ಈ ಬೇಡಿಕೆ ಕಾರಣ ಸಾಧ್ಯವಾಗಿಲ್ಲ.

==

ವಿನೇಶ್‌ ವಿರುದ್ಧ ಆಪ್‌ನಿಂದ ಡಬ್ಲುಡಬ್ಲುಇ ಪಟು ಕವಿತಾ ದಲಾಲ್‌ ಕಣಕ್ಕೆ

ಚಂಡೀಗಢ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಜುಲಾನಾ ಕ್ಷೇತ್ರದಲ್ಲಿ ಕುಸ್ತಿ ಪಟು , ಕಾಂಗ್ರೆಸ್‌ ಅಭ್ಯರ್ಥಿ ವಿನೇಶ್‌ ಪೋಗಟ್ ವಿರುದ್ಧ ಆಮ್‌ ಆದ್ಮಿ ಪಕ್ಷ, ವೃತ್ತಿಪರ ಕುಸ್ತಿ ಡಬ್ಲುಡಬ್ಲುಇ ಪಟು ಕವಿತಾ ದಲಾಲ್‌ಗೆ ಟಿಕೆಟ್‌ ನೀಡಿದೆ.ಬುಧವಾರ ಆಪ್‌ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ್ದು, 21 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಜುಲಾನಾ ಕ್ಷೇತ್ರದಲ್ಲಿ ವಿನೇಶ್‌ ವಿರುದ್ಧ ಈ ಹಿಂದೆ ಚೂಡಿದಾರ್‌ ಧರಿಸಿ ಡಬ್ಲ್ಯೂಡಬ್ಲ್ಯೂಇನಲ್ಲಿ ಸ್ಪರ್ಧಿಸಿದ್ದ ಕವಿತಾ ದಲಾಲ್‌ರಿಗೆ ಟಿಕೆಟ್‌ ನೀಡಿದೆ.

ವಿನೇಶ್‌ ವಿರುದ್ಧ ಸ್ಪರ್ಧೆಗೆ ಬಿಜೆಪಿ ಮಂಗಳವಾರವಷ್ಟೇ ಬಿಜೆಪಿ, ಪಕ್ಷದ ರಾಜ್ಯ ಕ್ರೀಡಾ ಘಟಕದ ಸಹ ಸಂಚಾಲಕ ಯೋಗಿಶ್‌ ಬೈರಾಗಿ ಹೆಸರನ್ನು ಘೋಷಿಸಿತ್ತು.

==

ನಟಿ ಮಲೈಕಾರ ಮಲತಂದೆ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಮುಂಬೈ: ಬಾಲಿವುಡ್‌ ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್‌ ಮೆಹ್ತಾ (65) ಬುಧವಾರ ಬೆಳಗ್ಗೆ 9 ಗಂಟೆಗೆ ಬಾಂದ್ರಾದ ಕಟ್ಟಡವೊಂದರ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅದಕ್ಕೂ ಮೊದಲೇ ಅವರ ಪ್ರಾಣ ಹೋಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ. ಪಂಚನಾಮೆ ಪೂರ್ಣಗೊಂಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಟ್ಟಡದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ ಇದು ಆತ್ಮಹತ್ಯೆ ಅಲ್ಲ, ಅಪಘಾತ ಎಂದಿರುವ ಮೂಲಗಳು, ಅವರಿಗೆ ಯಾವುದೇ ಖಾಯಿಲೆ ಇರದ ಕಾರಣ ಅವರೆಲ್ಲ ಆಘಾತಕ್ಕೊಳಗಾಗಿದ್ದಾರೆ. ಪಂಚನಾಮೆ ಬಂದಕೂಡಲೇ ಅದರಿಂದ ಎಲ್ಲಾ ಸ್ಪಷ್ಟವಾಗಲಿದೆ ಎಂದಿವೆ.

==

ಕಾಶ್ಮೀರದ ಉಧಂಪುರದಲ್ಲಿ ಚಕಮಕಿ: ಸೇನೆಯಿಂದ 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಕಠುವಾ ಬಳಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.ಭಾನುವಾರ ಬೆಳಗ್ಗೆ ಉಗ್ರರ ಇರುವಿಕೆಯ ಖಚಿತ ಮಾಹಿತಿ ಆಧರಿಸಿ ಸೇನೆಯ 22 ಗಢವಾಲ್‌ ರೈಫಲ್ಸ್‌, 1 ಪ್ಯಾರಾ ತಂಡ ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಉಧಂಪುರ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದವು. ಇದರ ಫಲವಾಗಿ 3 ಉಗ್ರರ ಹತ್ಯೆ ಮಾಡಲಾಗಿದೆ.

ಇದಕ್ಕೂ ಮುನ್ನ ಅಖನೂರ್‌ ವಲಯದಲ್ಲಿ ಪಾಕ್‌ ಪಡೆಗಳು ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿವೆ. ಆಗ ಒಬ್ಬ ಬಿಎಸ್‌ಎಫ್‌ ಯೋಧನಿಗೆ ಗಾಯಗಳಾಗಿವೆ.ಜಮ್ಮು ಕಾಶ್ಮೀರದಲ್ಲಿ ಸೆ.18, ಸೆ.25 ಮತ್ತು ಅ.1ರಂದು 3 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.