ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ, ಭರತನಾಟ್ಯ ಕಲಾವಿದೆ ಹಾಗೂ ಅಹುತಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡಿದ್ದ ಕನ್ನಡ ಭಕ್ತಿಗೀತೆ ‘ಪೂಜಿಸಲೆಂದೇ..’ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ, ಭರತನಾಟ್ಯ ಕಲಾವಿದೆ ಹಾಗೂ ಅಹುತಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡಿದ್ದ ಕನ್ನಡ ಭಕ್ತಿಗೀತೆ ‘ಪೂಜಿಸಲೆಂದೇ..’ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ.

ಮಂಗಳವಾರ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ಕನ್ನಡದಲ್ಲಿ ಶಿವಶ್ರೀ ಅವರ ಸುಶ್ರಾವ್ಯ ಗಾಯನ ಪ್ರಭು ರಾಮನೆಡೆಗಿನ ಭಕ್ತಿಯನ್ನು ತೋರ್ಪಡಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗುತ್ತವೆ’ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಧನ್ಯವಾದ ಹೇಳಿದ ಶಿವಶ್ರೀ: ಇದಕ್ಕೆ ಧನ್ಯವಾದ ಸಲ್ಲಿಸಿರುವ ಶಿವಶ್ರೀ ಸ್ಕಂದಪ್ರಸಾದ್‌, ‘ಪ್ರಧಾನಿ ನರೇಂದ್ರ ಮೋದಿಯೇ ನನ್ನ ಗಾಯನದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ನನ್ನ ಕಲ್ಪನೆಗೂ ಮೀರಿದ ಗೌರವದ ವಿಷಯವಾಗಿದೆ. 

ಇದು ನನಗೆ ಅತ್ಯಂತ ಸಂತೋಷದ ಕ್ಷಣವಾಗಿದ್ದು, ಸ್ವತಃ ಶ್ರೀರಾಮನೇ ನನ್ನನ್ನು ಹರಸಿದಷ್ಟು ಹರ್ಷಗೊಂಡಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಪೂಜಿಸಲೆಂದೇ ಹೂಗಳ ತಂದೆ ಹಾಡನ್ನು ಚಿ. ಉದಯಶಂಕರ್‌ ಕನ್ನಡದ ಎರಡು ಕನಸು ಚಿತ್ರಕ್ಕಾಗಿ ಸಾಹಿತ್ಯ ರಚಿಸಿದ್ದರು ಮತ್ತು ರಾಜನ್‌ ನಾಗೇಂದ್ರ ಸ್ವರ ಸಂಯೋಜನೆಯಲ್ಲಿ ಖ್ಯಾತ ಹಿನ್ನೆಲೆಯ ಗಾಯಕಿ ಎಸ್‌ ಜಾನಕಿ ಹಾಡಿದ್ದರು.