ಒಡಿಶಾದ ಪುರಿ ಜಗನ್ನಾಥ ಮಂದಿರದ ಖಜಾನೆ ಕೀಲಿಕೈಗಳ ನಾಪತ್ತೆಯಲ್ಲಿ ಬಿಜೆಡಿ ಕೈವಾಡ ಇದ್ದು,ಈ ಮೂಲಕ ನವೀನ್‌ ಪಟ್ನಾಯಕ್‌ ಸರ್ಕಾರದಲ್ಲಿ ದೇಗುಲಗಳೂ ಸುರಕ್ಷಿತವಲ್ಲ ಎಂದು ಸಾಬೀತಾದಂತಾಗಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಪುರಿ: ಒಡಿಶಾದ ಪುರಿ ಜಗನ್ನಾಥ ಮಂದಿರದ ಖಜಾನೆ ಕೀಲಿಕೈಗಳ ನಾಪತ್ತೆಯಲ್ಲಿ ಬಿಜೆಡಿ ಕೈವಾಡ ಇದ್ದು,ಈ ಮೂಲಕ ನವೀನ್‌ ಪಟ್ನಾಯಕ್‌ ಸರ್ಕಾರದಲ್ಲಿ ದೇಗುಲಗಳೂ ಸುರಕ್ಷಿತವಲ್ಲ ಎಂದು ಸಾಬೀತಾದಂತಾಗಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಒಡಿಶಾದಲ್ಲಿ ಪುರಿ ಜಗನ್ನಾಥ ದೇವರ ದರ್ಶನ ಪಡೆದ ಬಳಿಕ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ದೇಗುಲಗಳೂ ಸುರಕ್ಷಿತವಾಗಿಲ್ಲ. ಜಗದ್ವಿಖ್ಯಾತ ಪುರಿ ಜಗನ್ನಾಥ ಮಂದಿರದ ಖಜಾನೆ ಬೀಗದ ಕೈ ಕಳೆದ 6 ವರ್ಷಗಳಿಂದ ನಾಪತ್ತೆ ಆಗಿದೆ. ಇದಕ್ಕೆ ಮುಖ್ಯಮಂತ್ರಿ ಸುತ್ತ ಸುತ್ತುವ ಭಟ್ಟಂಗಿಗಳೇ ಕಾರಣ’ ಎನ್ನುವ ಮೂಲಕ ಮತದಾನಕ್ಕೆ ಕೆಲವೇ ದಿನಗಳಿರುವಂತೆ ಧಾರ್ಮಿಕ ಅಸ್ತ್ರ ಪ್ರಯೋಗಿಸಿದರು.

ಒಡಿಶಾದ ಪುರಿಯಲ್ಲಿ ಇದೇ 25ರಂದು ಮತದಾನ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಸಂಬಿತ್‌ ಪಾತ್ರ ಸ್ಪರ್ಧಿಸಿದ್ದಾರೆ.

ಯಾವಾಗ ನಾಪತ್ತೆ?:

ಪುರಿ ಜಗನ್ನಾಥ ದೇಗುಲದ ಖಜಾನೆಯನ್ನು ರತ್ನ ಭಂಡಾರ ಎಂಬ ಹೆಸರಿನಿಂದ ಕರೆಯಲಾಗಿದ್ದು, ಅದರಲ್ಲಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ಆಭರಣಗಳಿವೆ. ಜೊತೆಗೆ ಭಕ್ತಾದಿಗಳು ಮತ್ತು ರಾಜರು ದೇಣಿಗೆಯಾಗಿ ನೀಡಿದ ಆಭರಣಗಳೂ ಇವೆ. ಇದನ್ನು ಕೊನೆಯದಾಗಿ 1985ರ ಜುಲೈ 14ರಂದು ತೆರಯಲಾಗಿತ್ತು. ಇತ್ತೀಚೆಗೆ 2018ರಲ್ಲಿ ಒಡಿಶಾ ಹೈಕೋರ್ಟ್‌ ದೇಗುಲದ ಖಜಾನೆಗಳನ್ನು ತೆರೆಯುವಂತೆ ಸರ್ಕಾರಕ್ಕೆ ಸೂಚಿಸಿದಾಗ ಬೀಗದ ಕೈ ನಾಪತ್ತೆ ಆಗಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.