15 ಅಮಾಯಕ ಯಹೂದಿಗಳನ್ನು ಬಲಿ ಪಡೆದ ಬೋಂಡಿ ಬೀಚ್‌ ಉಗ್ರ ದಾಳಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಮುನ್ನವೇ ಆಸ್ಟ್ರೇಲಿಯಾ ಪೊಲೀಸರು ಮತ್ತೊಂದು ಸಂಭವನೀಯ ದಾಳಿಯ ಸಂಚು ವಿಫಲಗೊಳಿಸಿದ್ದಾರೆ.

ಸಿಡ್ನಿ: 15 ಅಮಾಯಕ ಯಹೂದಿಗಳನ್ನು ಬಲಿ ಪಡೆದ ಬೋಂಡಿ ಬೀಚ್‌ ಉಗ್ರ ದಾಳಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಮುನ್ನವೇ ಆಸ್ಟ್ರೇಲಿಯಾ ಪೊಲೀಸರು ಮತ್ತೊಂದು ಸಂಭವನೀಯ ದಾಳಿಯ ಸಂಚು ವಿಫಲಗೊಳಿಸಿದ್ದಾರೆ. ಗುಪ್ತಚರ ಮಾಹಿತಿಯನ್ನಾಧರಿಸಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಕಾರ್ಯಸನ್ನದ್ಧರಾಗಿದ್ದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಕಾರೊಂದನ್ನು ಅಡ್ಡಗಟ್ಟಿ 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಇವರು ಕೂಡಾ ಬೋಂಡಿ ಬೀಚ್ ಮಾದರಿಯ ದಾಳಿಗೆ ಸಜ್ಜಾಗಿದ್ದರು ಎಂಬ ಶಂಕೆ ಇದೆ.

ಶಂಕಿತ ದಾಳಿಕೋರರು ಮೆಲ್ಬರ್ನ್‌ನಿಂದ 2 ಕಾರುಗಳಲ್ಲಿ ಬೋಂಡಿ ಕಡೆ ತೆರಳುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ನೈಋತ್ಯ ಸಿಡ್ನಿಯ ಲಿವರ್‌ಪೂಲ್‌ ಎಂಬಲ್ಲಿ ಅವರ ಬೇಟೆಗೆ ಬಲೆ ಬೀಸಿದ್ದರು. ಆಗ ನಿರೀಕ್ಷೆಯಂತೆ ಬಂದ ಬಿಳಿ ಹ್ಯುಂಡೈ ಹ್ಯಾಚ್‌ಬ್ಯಾಕ್‌ ಕಾರಿಗೆ ಪೊಲೀಸ್‌ ತಮ್ಮ ಗಾಡಿಯನ್ನು ಗುದ್ದಿದರು. ಸ್ವಾಭಾವಿಕವಾಗಿ ಇನ್ನೊಂದು ಕಾರೂ ನಿಂತಿತು. ಬಳಿಕ ಅವುಗಳಲ್ಲಿದ್ದ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನೆಲ್ಲಾ ನೆಲದ ಮೇಲೆ ಕುಳ್ಳಿರಿಸಿ ಪೊಲೀಸರು ಪರಿಶೀಲನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಡಿ.14ರಂದು ಹನುಕ್ಕಾ ಆಚರಿಸುತ್ತಿದ್ದವರಲ್ಲಿ 15 ಜನರನ್ನು ಇಸ್ಲಾಮಿಸ್ಟ್‌ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಅಪ್ಪ-ಮಗ ಹತ್ಯೆ ಮಾಡಿದ ಘಟನೆಯ ಬಳಿಕ ಆಸ್ಟ್ರೇಲಿಯಾ ಪೊಲೀಸರು ಕಟ್ಟೆಚ್ಚ ವಹಿಸಿದ್ದಾರೆ. ಸದ್ಯ ವಶದಲ್ಲಿರುವವರಿಗೆ ಹಾಗೂ ಬೋಂಡಿ ದಾಳಿಕೋರ ಅಪ್ಪ-ಮಗನಿಗೆ ನಂಟಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಬೋಂಡಿ ದಾಳೀಲಿ ಹಲವರ ಜೀವ ಕಾಪಾಡಿದ್ದ ಅಮನ್‌ದೀಪ್‌ ಸಿಂಗ್‌!

ಮೆಲ್ಬರ್ನ್‌: ಡಿ.14ರಂದು ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಹನಕ್ಕಾ ಹಬ್ಬ ಆಚರಿಸುತ್ತಿದ್ದ 15 ಯಹೂದಿಗಳ ಮಾರಣಹೋಮಗೈದ ಉಗ್ರರನ್ನು ಭಾರತೀಯ ಮೂಲದವರೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ತಡೆದು ಹಲವರ ಜೀವ ಉಳಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. 

ಪರಾಕ್ರಮಿಯ ಹೆಸರು ಅಮನ್‌ದೀಪ್‌ ಸಿಂಗ್‌

ಈ ಪರಾಕ್ರಮಿಯ ಹೆಸರು ಅಮನ್‌ದೀಪ್‌ ಸಿಂಗ್‌ ಬೋಲಾ. ನ್ಯೂಜಿಲೆಂಡ್‌ನಲ್ಲಿ ಜನಿಸಿದ ಬೋಲಾರ ಹೆತ್ತವರು ಭಾರತೀಯರು.ಸಾಜಿದ್‌ ಮತ್ತು ನವೀದ್‌ ಅಕ್ರಂ ಎಂಬ ಅಪ್ಪ-ಮಗ ಮನಸೋಇಚ್ಛೆ ದಾಳಿ ನಡೆಸುತ್ತಿದ್ದ ವೇಳೆ ಬೋಲಾ ಅವರತ್ತ ನುಗ್ಗಿದ್ದಲ್ಲದೆ ಸಾಜಿದ್‌ನಲ್ಲಿ ಹಿಡಿಯುವಲ್ಲಿ ಸಹಕರಿಸಿದರು. ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಕಬಾಬ್‌ ತಿನ್ನುತ್ತ ಸೂರ್ಯಾಸ್ತವನ್ನು ಆಸ್ವಾದಿಸುತ್ತಿದ್ದ ವೇಳೆ ಗುಂಡಿನ ಮೊರೆತ ಶುರುವಾಯಿತು. ಕೂಡಲೇ ದಾಳಿಕೋರನ(ಸಾಜಿದ್‌) ಮೇಲೆ ಹಾರಿ ಅವನ ಕೈ ಹಿಡಿದೆ. ಸಾಜಿದ್‌ನನ್ನು ನಾನು ಹಿಡಿದಿದ್ದಾಗಲೇ ಪೊಲೀಸರು ಗುಂಡು ಹೊಡೆದು ಆತನನ್ನು ಕೊಂದರು. ಅವನು ಸಾಯುತ್ತಿರುವ ಅನುಭವ ನನಗಾಗುತ್ತಿತ್ತು’ ಎಂದು ಹೇಳಿದ್ದಾರೆ.