ಸಾರಾಂಶ
ಈ ಕಾರ್ಯಕ್ರಮದಲ್ಲಿ 60ಕ್ಕಿಂತ ಹೆಚ್ಚು ಹಿಂದು ಸಂಸ್ಥೆಗಳು ಭಾಗವಹಿಸಿ, ಹಿಂದು ಸಮುದಾಯವನ್ನು ಪ್ರಭಾವಿತಗೊಳಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದವು. ಆಸ್ಟ್ರೇಲಿಯಾದಲ್ಲಿ ಸಮಾಜ ಸಾಮರಸ್ಯ ಮತ್ತು ಹಿಂದು ಸಮಾಜದ ಕೊಡುಗೆಗಳನ್ನು ಹೆಚ್ಚಿಸುವ ಬಗ್ಗೆ ನಿರ್ಧಾರಗಳನ್ನು ಕೈಗೊಂಡವು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿಯವರ ಸದಾಶಯದಂತೆ, ಆಸ್ಟ್ರೇಲಿಯಾದ ಸಿಡ್ನಿಯ ಶ್ರೀ ಪುತ್ತಿಗೆ ಮಠದ ವತಿಯಿಂದ ಜೂನ್ 1ರಂದು ಹೋಟಾ (ಹಿಂದು ಧರ್ಮ ಸಂಸ್ಥೆಗಳು, ದೇವಾಲಯಗಳು ಮತ್ತು ಸಂಘಟನೆಗಳು) ಆಸ್ಟ್ರೇಲಿಯಾದ ಪ್ರಯತ್ನದಡಿ ಹಿಂದೂ ಮಂದಿರಗಳ ಸಮಾವೇಶ ಯಶಸ್ವಿಯಾಗಿ ನಡೆಯಿತು.ಈ ಕಾರ್ಯಕ್ರಮದಲ್ಲಿ 60ಕ್ಕಿಂತ ಹೆಚ್ಚು ಹಿಂದು ಸಂಸ್ಥೆಗಳು ಭಾಗವಹಿಸಿ, ಹಿಂದು ಸಮುದಾಯವನ್ನು ಪ್ರಭಾವಿತಗೊಳಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದವು. ಆಸ್ಟ್ರೇಲಿಯಾದಲ್ಲಿ ಸಮಾಜ ಸಾಮರಸ್ಯ ಮತ್ತು ಹಿಂದು ಸಮಾಜದ ಕೊಡುಗೆಗಳನ್ನು ಹೆಚ್ಚಿಸುವ ಬಗ್ಗೆ ನಿರ್ಧಾರಗಳನ್ನು ಕೈಗೊಂಡವು.ಈ ಸಮಾವೇಶದಲ್ಲಿ ಆಸ್ಟ್ರೇಲಿಯಾದ ಸಂಸದರಾದ ಸ್ಕಾಟ್ ಫಾರ್ಲೋ, ವಾರನ್ ಕಿರ್ಬಿ, ಹ್ಯೂ ಮ್ಯಾಕ್‌ಡರ್ಮಟ್, ನ್ಯೂ ಸೌತ್ ವೇಲ್ಸ್ ಮುಖ್ಯಮಂತ್ರಿಯವರ ಪ್ರತಿನಿಧಿಯಾಗಿ ಜುಲಿಯನ್ ಫಿನ್, ಬ್ಲ್ಯಾಕ್‌ಟೌನ್ ಸಿಟಿ ಕಾರ್ಪೊರೇಶನ್‌ನ ಸದಸ್ಯರಾದ ಮೊನಿಂದರ್ ಸಿಂಗ್ ಮತ್ತು ಮೋಹಿತ್ ಕುಮಾರ್ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ಅಟಾರ್ನಿ ಜನರಲ್ ಮಿಶೆಲ್ ರೋಲ್ಯಾಂಡ್ ಅವರು ವಿಶೇಷ ಸಂದೇಶವನ್ನು ಕಳುಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.200ಕ್ಕಿಂತ ಹೆಚ್ಚು ಜನ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀ ಕೃಷ್ಣಮಠದ ಐತಿಹಾಸಿಕ ಮಹತ್ವ, ಜಗದ್ಗುರು ಶ್ರೀಮಾನ್ ಮಧ್ವಾಚಾರ್ಯರ ತತ್ವಶಾಸ್ತ್ರ ಮತ್ತ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ವಿಶ್ವ ಶಾಂತಿ, ಅಸ್ತ್ರಸಜ್ಜೀಕರಣ ನಿಷೇಧ ಮತ್ತು ಧರ್ಮ ಸೌಹಾರ್ದತೆಗಾಗಿ ವಿಶ್ವದ ಮಟ್ಟದಲ್ಲಿ ಸಂಯುಕ್ತ ರಾಷ್ಟ್ರಗಳ ಮೂಲಕ ಮಾಡಿದ ಅಪ್ರತಿಮ ಕೊಡುಗೆಯ ಬಗ್ಗೆ ವಿವರಗಳನ್ನು ನೀಡಲಾಯಿತು.