ಹೆಚ್ಚು ಇಳುವರಿ ನೀಡುವ ಕರ್ನಾಟಕದ 15 ತಳಿ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

| Published : Aug 12 2024, 01:03 AM IST / Updated: Aug 12 2024, 05:18 AM IST

ಸಾರಾಂಶ

ಹೆಚ್ಚು ಇಳುವರಿ ನೀಡುವ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ ಹಾಗೂ ಜೈವಿಕವಾಗಿ ಬಲವರ್ಧನೆಗೊಂಡ 109 ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು. ಇವುಗಳಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಲಾದ 15 ತಳಿಯ ಬೀಜಗಳೂ ಸೇರಿವೆ.

 ನವದೆಹಲಿ :  ಹೆಚ್ಚು ಇಳುವರಿ ನೀಡುವ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ ಹಾಗೂ ಜೈವಿಕವಾಗಿ ಬಲವರ್ಧನೆಗೊಂಡ 109 ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು. ಇವುಗಳಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಲಾದ 15 ತಳಿಯ ಬೀಜಗಳೂ ಸೇರಿವೆ.

ಕೃಷಿಕರ ಆದಾಯವನ್ನು ಹಾಗೂ ಕೃಷಿ ಉತ್ಪನ್ನಗಳ ಇಳುವರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ಮೂಲಕ ಈ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿರುವ ಪ್ರಾಯೋಗಿಕ ಕೃಷಿ ಜಮೀನಿನಲ್ಲಿ ಮೋದಿ ಇವುಗಳನ್ನು ಬಿಡುಗಡೆ ಮಾಡಿ ರೈತರೊಂದಿಗೆ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು.

ಭಾನುವಾರ ಬಿಡುಗಡೆಯಾದ ಬೀಜಗಳಲ್ಲಿ ಮಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾದ ಎರಡು ತಳಿಯ ಗೇರು ಬೀಜಗಳು ಹಾಗೂ ಬೆಂಗಳೂರಿನ ಐಐಎಚ್‌ಆರ್‌ನಲ್ಲಿ ಅಭಿವೃದ್ಧಿಪಡಿಸಲಾದ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿ, ಹೂವು ಮತ್ತು ಔಷಧೀಯ ಬೆಳೆಯ 13 ತಳಿಗಳು ಸೇರಿವೆ.

ಕೃಷಿ ಆದಾಯ ವೃದ್ಧಿಗೆ ಮೋದಿ ಕರೆ:

ಈ ವೇಳೆ ರೈತರೊಂದಿಗೆ ಕೃಷಿ ಜಮೀನಿಗೇ ತೆರಳಿ ಸಂವಾದ ನಡೆಸಿ ಮಾತನಾಡಿದ ಮೋದಿ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರು ಆದಾಯ ವೃದ್ಧಿಸಿಕೊಳ್ಳಬೇಕು. ಜನರು ಪೌಷ್ಟಿಕಾಂಶಯುಕ್ತ ಆಹಾರಗಳ ಬಗ್ಗೆ ಒಲವು ತೋರುತ್ತಿದ್ದು, ಅದರ ಲಾಭ ಪಡೆಯಲು ಸಿರಿಧಾನ್ಯಗಳಿಗೆ ರೈತರು ಒತ್ತು ನೀಡಬಹುದು ಎಂದು ಹೇಳಿದರು.