ಇನ್‌ಫ್ಲುಯೆನ್ಸರ್‌ಗಳು ಯುವಕರಿಗೆ ಮತದಾನ ಮಾಡಲು ಪ್ರೇರೇಪಿಸಿ ಎಂದು 110ನೇ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಕರೆ ನೀಡಿದ್ದಾರೆ.

ಪಿಟಿಐ ನವದೆಹಲಿ

18ನೇ ಲೋಕಸಭೆ ಈ ದೇಶದ ಯುವಕರ ಆಶೋತ್ತರಗಳ ಗುರುತಾಗಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಯ ಮತದಾರರು ದೇಶಕ್ಕಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

110ನೇ ಮಾಸಿಕ ಮನ್‌ ಕಿ ಬಾತ್‌ನಲ್ಲಿ ಭಾನುವಾರ ಮಾತನಾಡಿದ ಅವರು, ‘ಯುವಕರು ಕೇವಲ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೊಂದೇ ಅಲ್ಲ, ಅದರ ಜೊತೆಗೆ ಸಮಕಾಲೀನ ಚರ್ಚೆಗಳು ಹಾಗೂ ಸಂವಾದಗಳ ಕುರಿತೂ ಗಮನವಿಡಬೇಕು. 

ನಿಮ್ಮ ಮೊದಲ ಮತ ದೇಶಕ್ಕಾಗಿ ಚಲಾವಣೆಯಾಗಬೇಕು ಎಂಬುದು ಗಮನದಲ್ಲಿರಲಿ. ಚುನಾವಣಾ ಆಯೋಗ ಕೂಡ ‘ನನ್ನ ಮೊದಲ ಮತ ದೇಶಕ್ಕಾಗಿ’ ಎಂಬ ಆಂದೋಲನ ನಡೆಸುತ್ತಿದೆ. ಯುವಕರು ಮತದಾನದಲ್ಲಿ ದಾಖಲೆಯ ಪ್ರಮಾಣದಲ್ಲಿ ಪಾಲ್ಗೊಂಡರೆ ದೇಶಕ್ಕೆ ಲಾಭವಿದೆ’ ಎಂದು ಹೇಳಿದರು. 

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಇನ್ನಿತರ ಪ್ರಭಾವಿ ವ್ಯಕ್ತಿಗಳು ಮೊದಲ ಸಲದ ಮತದಾರರಿಗೆ ಮತದಾನ ಮಾಡುವುದಕ್ಕೆ ಪ್ರೋತ್ಸಾಹಿಸಬೇಕು ಎಂದೂ ಅವರು ಮನವಿ ಮಾಡಿದರು.

ಇನ್ನು 3 ತಿಂಗಳು ಮನ್‌ ಕಿ ಬಾತ್‌ ಇಲ್ಲ: ಮೋದಿ
ಸದ್ಯದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಇನ್ನು ಮೂರು ತಿಂಗಳು ಮನ್‌ ಕಿ ಬಾತ್‌ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.‘ಮುಂದಿನ ಸಲ ನಾವು ಭೇಟಿಯಾಗುವುದು 111ನೇ ಮನ್‌ ಕಿ ಬಾತ್‌ನಲ್ಲಾಗಿರುತ್ತದೆ. 

ಈ ಸಂಖ್ಯೆಗಿಂತ ಶುಭ ಸಂಖ್ಯೆ ಇನ್ನೊಂದಿಲ್ಲ’ ಎಂದು ಹೇಳುವ ಮೂಲಕ ಅವರು ಮತ್ತೆ ತಾವೇ ಪ್ರಧಾನಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ನಲ್ಲಿ ಚುನಾವಣೆ ಘೋಷಣೆ ನಿಶ್ಚಿತಮಾರ್ಚ್‌ ತಿಂಗಳಲ್ಲಿ ಯಾವಾಗ ಬೇಕಾದರೂ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ. 

ತನ್ಮೂಲಕ ಈಗಾಗಲೇ ಚರ್ಚೆಯಲ್ಲಿರುವಂತೆ ಮಾರ್ಚ್‌ನಲ್ಲಿ ಮುಂದಿನ ಲೋಕಸಭೆ ಚುನಾವಣೆ ಘೋಷಣೆಯಾಗುವುದು ನಿಶ್ಚಿತ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.