ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸುಧಾರಣೆ - ಏಕಚುನಾವಣೆ ಮಸೂದೆ ಶೀಘ್ರ : ಪ್ರಧಾನಿ ನರೇಂದ್ರ ಮೋದಿ

| Published : Nov 01 2024, 12:09 AM IST / Updated: Nov 01 2024, 06:26 AM IST

PM Modi diwali celebration

ಸಾರಾಂಶ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸುಧಾರಣೆಯಾಗಿರುವ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವವನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುತ್ತಿದೆ.

ಕೆವಡಿಯಾ (ಗುಜರಾತ್‌): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸುಧಾರಣೆಯಾಗಿರುವ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವವನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುತ್ತಿದೆ. ಇದೇ ವರ್ಷ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ.

ಸಾಮಾನ್ಯವಾಗಿ, ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್‌-ಡಿಸೆಂಬರ್‌ ಅವಧಿಯಲ್ಲಿ ನಡೆಯುತ್ತದೆ. ಹೀಗಾಗಿ ಈ ಮಹತ್ವದ ಸುಧಾರಣಾ ವಿಧೇಯಕ ಇನ್ನೊಂದು ತಿಂಗಳಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.

ಆದರೆ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ಕೊಟ್ಟಿದ್ದಾರೆ. ಏಕ ಚುನಾವಣೆಯನ್ನು ಮೋದಿ ಅವರು ಜಾರಿಗೆ ತರುವುದಿಲ್ಲ. ಏಕೆಂದರೆ ಅದರ ಅನುಷ್ಠಾನಕ್ಕೆ ಪ್ರತಿಯೊಬ್ಬರನ್ನೂ ಸಂಸತ್ತಿನಲ್ಲಿ ವಿಶ್ವಾಸಕ್ಕೆ ಪಡೆಯಬೇಕು. ಆಗ ಮಾತ್ರ ಸಾಧ್ಯ. ಆದರೆ ಅದು ಸಾಧ್ಯ. ಹೀಗಾಗಿ ಒಂದು ದೇಶ ಒಂದು ಚುನಾವಣೆ ಜಾರಿ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಏಕತಾ ದಿನದಲ್ಲಿ ಮೋದಿ ಘೋಷಣೆ:

ದೇಶದ ಮೊದಲ ಉಪಪ್ರಧಾನಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ 149ನೇ ಜನ್ಮಸ್ಮರಣೆ ಹಿನ್ನೆಲೆಯಲ್ಲಿ ಗುಜರಾತಿನ ಕೆವಡಿಯಾದಲ್ಲಿರುವ ಅವರ ಪ್ರತಿಮೆ ಸ್ಥಳದಲ್ಲಿ ಏಕತಾ ದಿನ ಕಾರ್ಯಕ್ರಮದಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದ ಮೋದಿ ಅವರು, ಏಕ ಚುನಾವಣೆಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಲಿದೆ. ದೇಶದ ಸಂಪನ್ಮೂಲಗಳ ಗರಿಷ್ಠ ಬಳಕೆ ಸಾಧ್ಯವಾಗಲಿದೆ. ಅಭಿವೃದ್ಧಿ ಹೊಂದಿದ ಭಾರತ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ವೇಗ ಸಿಗಲಿದೆ ಎಂದು ಹೇಳಿದರು.

ನಾಗರಿಕ ಸಂಹಿತೆ:

ಇದೇ ವೇಳೆ ಕೇಂದ್ರ ಸರ್ಕಾರ ಮತ್ತೊಂದು ಹೆಬ್ಬಯಕೆಯಾಗಿರುವ ಏಕರೂಪ ನಾಗರಿಕ ಸಂಹಿತೆ ಬಗ್ಗೆಯೂ ಮೋದಿ ಅವರು ಪ್ರಸ್ತಾಪಿಸಿದರು. ಇಂದು ಭಾರತ ‘ಒಂದು ದೇಶ ಒಂದು ನಾಗರಿಕ ಸಂಹಿತೆ’ಯತ್ತ ಹೆಜ್ಜೆ ಹಾಕುತ್ತಿದೆ. ಅದು ಜಾತ್ಯತೀತ ನಾಗರಿಕ ಸಂಹಿತೆಯಾಗಿದೆ ಎಂದು ಹೇಳಿದರು.

ಒಂದು ದೇಶ ಒಂದು ಗುರುತು ಎಂಬುದು ಯಶಸ್ವಿ ಕ್ರಮವಾಗಿದೆ ಎಂದು ಹೇಳಿದ ಅವರು, ಅದೇ ಸಾಲಿನಲ್ಲಿ ಬರುವ ಆಧಾರ್‌, ಜಿಎಸ್‌ಟಿ, ಒಂದು ದೇಶ ಒಂದು ವಿದ್ಯುತ್‌ ಗ್ರಿಡ್‌, ಒಂದು ದೇಶ ಒಂದು ಪಡಿತರ ಚೀಟಿ ಕಾರ್ಯಕ್ರಮಗಳನ್ನು ಉದಾಹರಿಸಿದರು.

ಏನಿದು ಏಕ ಚುನಾವಣೆ?:

‘ಒಂದು ದೇಶ ಒಂದು ಚುನಾವಣೆ’ ಎಂಬುದು ಹೆಸರೇ ಸೂಚಿಸುವಂತೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಅಥವಾ ಸೀಮಿತ ಕಾಲಾವಧಿಯಲ್ಲಿ ನಡೆಸುವ ಸರ್ಕಾರ ಮಹತ್ವದ ಚುನಾವಣಾ ಸುಧಾರಣೆಯಾಗಿದೆ. ಇದರ ಜಾರಿ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಆ ಸಮಿತಿಯು ಈ ಸುಧಾರಣೆಯನ್ನು ಯಾವ ರೀತಿ ಜಾರಿಗೆ ತರಬೇಕು ಎಂದು ಕಳೆದ ತಿಂಗಳಷ್ಟೇ ವರದಿ ಕೊಟ್ಟಿತ್ತು.