ಇದುವರೆಗೆ ನೋಡಿದ್ದು ಟ್ರೇಲರ್‌, ನೈಜ ಅಭಿವೃದ್ಧಿ ಇನ್ಮೇಲೆ: ಮೋದಿ

| Published : Apr 01 2024, 12:50 AM IST / Updated: Apr 01 2024, 04:55 AM IST

ಇದುವರೆಗೆ ನೋಡಿದ್ದು ಟ್ರೇಲರ್‌, ನೈಜ ಅಭಿವೃದ್ಧಿ ಇನ್ಮೇಲೆ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಸರ್ಕಾರದ ಮೊದಲ 100 ದಿನಗಳಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಲಾಗುವುದು. ನಮ್ಮ ಮಂತ್ರ ಭ್ರಷ್ಟಾಚಾರ್ ಹಟಾವೋ, ವಿಪಕ್ಷಗಳದ್ದು ಭ್ರಷ್ಟಾಚಾರಿ ಬಚಾವೋ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮೇರಠ್‌: ಲೋಕಸಭೆ ಚುನಾವಣೆ ಘೋಷಣೆ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಈ ವೇಳೆ ಅವರು ಇಂಡಿಯಾ ಕೂಟದ ನಾಯಕರನ್ನು ಭ್ರಷ್ಟಾಚಾರ ಹಾಗೂ ರೈತ ವಿರೋಧಿ ನೀತಿಗಳಿಗೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ‘ಕಳೆದ 10 ವರ್ಷಗಳಲ್ಲಿ ಕೇವಲ ಅಭಿವೃದ್ಧಿಯ ಟ್ರೇಲರ್‌ ಮಾತ್ರ ನೋಡಿದ್ದೀರಿ. ಇನ್ನು 5 ವರ್ಷದಲ್ಲಿ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೊಸ ಸರ್ಕಾರದ ಮೊದಲ 100 ದಿನಗಳಲ್ಲಿ ನಾವು ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೇವೆ. ಈ ಚುನಾವಣೆಗಳು ಸರ್ಕಾರವನ್ನು ಆಯ್ಕೆ ಮಾಡಲು ಅಲ್ಲ, ಆದರೆ ‘ವಿಕಸಿತ ಭಾರತ’ ನಿರ್ಮಾಣ ಮಾಡಲು’ ಎಂದಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಪ್ರಹಾರ:

ಭಾರತ ರತ್ನ ಚೌಧರಿ ಚರಣ್‌ ಸಿಂಗ್ ತವರು ಮೇರಠ್‌ನಲ್ಲಿ ಭಾನುವಾರ ಪ್ರಚಾರ ಭಾಷಣ ಮಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ, ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೇವೆ ಎಂಬುದನ್ನು ದೇಶವು ನೋಡಿದೆ. ಯಾವುದೇ ಮಧ್ಯವರ್ತಿಯು ಬಡವರ ಹಣವನ್ನು ಕದಿಯಲು ಸಾಧ್ಯವಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. 

ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ, ಅದಕ್ಕಾಗಿಯೇ ಭ್ರಷ್ಟರು ಇಂದು ಕಂಬಿ ಹಿಂದೆ ಬಿದ್ದಿದ್ದಾರೆ. ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಸಿಗುತ್ತಿಲ್ಲ’ ಎಂದು ಜೈಲಿಗೆ ಹೋದ ರಾಜಕೀಯ ನಾಯಕರ ಹೆಸರೆತ್ತದೇ ಕುಟುಕಿದರು.‘ಅದರೆ ನಾವು ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವುದರಿಂದ ಕೆಲವರು ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಈ ಚುನಾವಣೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಎನ್‌ಡಿಎ ಮತ್ತು ಭ್ರಷ್ಟರನ್ನು ಉಳಿಸಲು ಹೋರಾಡುತ್ತಿರುವ ಇನ್ನೊಂದು ಗುಂಪಿನ ನಡುವೆ. ನನ್ನ ಮಂತ್ರ ‘ಭ್ರಷ್ಟಾಚಾರ್ ಹಟಾವೋ’ ಆದರೆ, ವಿಪಕ್ಷಗಳ ಮಂತ್ರ ‘ಭ್ರಷ್ಟಾಚಾರಿ ಬಚಾವೋ’ ಆಗಿದೆ’ ಎಂದರು. 

ಈ ಮೂಲಕ ಭಾನುವಾರ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಇಂಡಿಯಾ ಕೂಟಕ್ಕೆ ಟಾಂಗ್‌ ನೀಡಿದರು.‘ನಾವು ಕೇವಲ ಭ್ರಷ್ಟರ ಬಗ್ಗೆ ತನಿಖೆ ನಡೆಸುತ್ತಿಲ್ಲ, ಜನರ ಕದ್ದ ಸಂಪತ್ತನ್ನು ಅವರಿಗೆ ಹಿಂದಿರುಗಿಸುತ್ತಿದ್ದೇವೆ. ದೇಶದ ಜನರನ್ನು ಲೂಟಿ ಮಾಡಿದವರು ಯಾರೇ ಆಗಿರಲಿ. ಜನರ ಕದ್ದ ಸಂಪತ್ತನ್ನು ನಾನು ಜನರಿಗೇ ಹಿಂದಿರುಗಿಸುತ್ತೇನೆ’ ಎಂದು ವಾಗ್ದಾನ ಮಾಡಿದರು.ರೈತರ ವಿಚಾರದಲ್ಲಿ ತರಾಟೆ:

‘ರೈತರನ್ನು ದ್ವೇಷಿಸುವ ಇಂಡಿಯಾ ಒಕ್ಕೂಟವು ಭಾರತ ರತ್ನ ಚೌಧರಿ ಚರಣ್ ಸಿಂಗ್‌ಗೆ ಸರಿಯಾದ ಗೌರವವನ್ನೂ ನೀಡಲಿಲ್ಲ. ಸಂಸತ್ತಿನಲ್ಲಿ ಚೌಧರಿ ಚರಣ್‌ ಸಿಂಗ್‌ ಬಗ್ಗೆ ಅವರ ಮೊಮ್ಮಗ ಜಯಂತ ಚೌಧರಿ ಮಾತನಾಡುವಾಗ ವಿಪಕ್ಷಗಳ ಗದ್ದಲ ಹಾಕಿದವು. ಹೀಗಾಗಿ ಕಾಂಗ್ರೆಸ್ ಮತ್ತು ಎಸ್‌ಪಿ ಮನೆ ಮನೆಗೆ ತೆರಳಿ ಇದಕ್ಕಾಗಿ ಈ ಭಾಗದ ರೈತರ ಕ್ಷಮೆಯಾಚಿಸಬೇಕು’ ಎಂದು ಪ್ರಧಾನಿ ಆಗ್ರಹಿಸಿದರು.