ಇಂಡಿಯಾ ಕೂಟ ಗೆದ್ದರೆ ರಾಮಮಂದಿರಕ್ಕೆ ಬುಲ್ಡೋಜರ್‌ ಹತ್ತಿಸ್ತಾರೆ: ಮೋದಿ ಎಚ್ಚರಿಕೆ

| Published : May 18 2024, 01:30 AM IST / Updated: May 18 2024, 05:01 AM IST

pm modi 5.jpg
ಇಂಡಿಯಾ ಕೂಟ ಗೆದ್ದರೆ ರಾಮಮಂದಿರಕ್ಕೆ ಬುಲ್ಡೋಜರ್‌ ಹತ್ತಿಸ್ತಾರೆ: ಮೋದಿ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗಿ ಬಳಿ ಅವರು ಟ್ಯೂಷನ್‌ಗೆ ಹೋಗಲಿ ಎಂದು ಯುಪಿಯಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ಎಸ್ಪಿ- ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ವೋಟ್‌ ಜಿಹಾದ್‌ ಮಾಡುವವರಿಗೆ ಹಂಚುತ್ತಾರೆ. ಆದರೆ ಅವರು ಗೆಲ್ಲುವುದಿಲ್ಲ  ಎಂದು ನರೇಂದ್ರ ಮೋದಿಹೇಳಿದ್ದಾರೆ.

 ಬಾರಾಬಂಕಿ/ಹಮೀರ್‌ಪುರ :  ಇಂಡಿಯಾ ಕೂಟದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳನ್ನೇನಾದರೂ ಚುನಾಯಿಸಿಬಿಟ್ಟರೆ ಆ ಪಕ್ಷಗಳು ಅಯೋಧ್ಯೆ ರಾಮಮಂದಿರದ ಮೇಲೆ ಬುಲ್ಡೋಜರ್‌ ಹತ್ತಿಸಿಬಿಡುತ್ತವೆ ಎಂದು ಹೇಳಿದ್ದಾರೆ. ಅಲ್ಲದೆ, ಬುಲ್ಡೋಜರ್‌ಗಳನ್ನು ಎಲ್ಲಿ ಓಡಿಸಬೇಕು ಎಂಬ ಬಗ್ಗೆ ಆ ಎರಡೂ ಪಕ್ಷಗಳು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಳಿ ಟ್ಯೂಷನ್‌ ಪಡೆಯಲಿ ಎಂದು ಮೂದಲಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕರೊಬ್ಬರು ರಾಮಮಂದಿರವನ್ನು ನಿರುಪಯುಕ್ತ ಎನ್ನುತ್ತಾರೆ. ರಾಮಮಂದಿರಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್‌ ತೀರ್ಪನ್ನೇ ಬದಲಿಸಲು ಕಾಂಗ್ರೆಸ್‌ ಸಜ್ಜಾಗುತ್ತಿದೆ. ಸಮಾಜವಾದಿ- ಕಾಂಗ್ರೆಸ್‌ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಮ ಲಲ್ಲಾವನ್ನು ಮರಳಿ ಟೆಂಟ್‌ಗೆ ಕಳುಹಿಸಿ, ಮಂದಿರಕ್ಕೆ ಬುಲ್ಡೋಜರ್‌ ಹತ್ತಿಸುತ್ತಾರೆ ಎಂದಿದ್ದಾರೆ.

ಮೇ 20ರಂದು ಚುನಾವಣೆ ನಡೆಯಲಿರುವ ಉತ್ತರಪ್ರದೇಶದ ಬಾರಾಬಂಕಿ ಹಾಗೂ ಹಮೀರ್‌ಪುರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಜನರ ಮತಗಳನ್ನು ಬಳಸಿ ಎಸ್ಪಿ- ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನಗಳ ಆಸ್ತಿಯನ್ನು ವೋಟ್‌ ಜಿಹಾದ್‌ ಮಾಡುವವರಿಗೆ ಹಂಚಿ ಬಿಡುತ್ತಾರೆ ಎಂದು ಆರೋಪಿಸಿದರು.

ಅಧಿಕಾರಕ್ಕೆ ಬಂದರೆ ಸಂವಿಧಾನದ 370ನೇ ವಿಧಿಯನ್ನು ವಾಪಸ್‌ ತರುತ್ತೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಅಲ್ಲದೆ ಪಾಕಿಸ್ತಾನದ ಬಳಿ ಅಣು ಬಾಂಬ್‌ ಇದೆ ಎಂದೂ ತಿಳಿಸುತ್ತಿದೆ. ಪಾಕಿಸ್ತಾನದ ಬಳಿ ಅಣು ಬಾಂಬ್‌ ಇದ್ದರೂ ಅದನ್ನು ನಿರ್ವಹಿಸಲು ಆ ದೇಶದ ಬಳಿ ಹಣ ಇಲ್ಲ ಎಂಬ ವಾಸ್ತವ ಕಾಂಗ್ರೆಸ್ಸಿಗೆ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅಸ್ಥಿರತೆಯನ್ನು ಸೃಷ್ಟಿಸುವ ಸಲುವಾಗಿಯೇ ಇಂಡಿಯಾ ಕೂಟ ಚುನಾವಣೆ ಕಣಕ್ಕಿಳಿದಿದೆ. ಚುನಾವಣೆ ನಡೆದಂತೆಲ್ಲಾ ಅದು ಇಸ್ಪೀಟ್‌ ಕಾರ್ಡ್‌ನಂತೆ ಕುಸಿಯುತ್ತಿದೆ ಎಂದು ಲೇವಡಿ ಮಾಡಿದರು.

ನನ್ನ ಹ್ಯಾಟ್ರಿಕ್‌ ಖಚಿತ:  ಬಡವರು, ಯುವಕರು, ಮಹಿಳೆಯರು ಹಾಗೂ ರೈತರ ಪರವಾಗಿ ಹಲವಾರು ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಹಾಗಾಗಿಯೇ ಮತ ಕೇಳಲು ಬಂದಿದ್ದೇನೆ. ನನ್ನ ಸರ್ಕಾರ ಹ್ಯಾಟ್ರಿಕ್‌ ಜಯಭೇರಿ ಬಾರಿಸಲಿದೆ. ಜೂ.4 ಬಹಳ ದೂರ ಇಲ್ಲ. ಮೋದಿ ಹ್ಯಾಟ್ರಿಕ್‌ ಬಾರಿಸಲಿದ್ದಾರೆ ಎಂದು ದೇಶ- ವಿದೇಶಗಳಿಗೂ ಗೊತ್ತಾಗಿದೆ ಎಂದರು.

ಕೆಲಸ ಮಾಡಲು ಹಾಗೂ ನಿಮಗೆ ಒಳ್ಳೆಯದು ಮಾಡಲು ನಿಮಗೆ ಸಂಸದರು ಬೇಕು. ನಿಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸಲು ನಮಗೆ ಸಂಸದರು ಬೇಕೇ ಹೊರತು, ಐದು ವರ್ಷ ಕಾಲ ಮೋದಿಯನ್ನು ಬೈಯುವವರಲ್ಲ. 100 ಸಿಸಿ ಎಂಜಿನ್‌ ಇಟ್ಟುಕೊಂಡು 1000 ಸಿಸಿ ಎಂಜಿನ್‌ ಸ್ಪೀಡ್‌ನಲ್ಲಿ ಹೋಗಲಾಗದು. ಹೀಗಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.