ಗ್ಯಾರಂಟಿ ಸ್ಕೀಂ ವಿರುದ್ಧ ನರೇಂದ್ರ ಮೋದಿ ಚಾಟಿ

| Published : Mar 10 2024, 01:34 AM IST / Updated: Mar 10 2024, 10:22 AM IST

Narendra Modi
ಗ್ಯಾರಂಟಿ ಸ್ಕೀಂ ವಿರುದ್ಧ ನರೇಂದ್ರ ಮೋದಿ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರಿಗೆ ಕನಿಷ್ಠ ಸೌಲಭ್ಯವೇ ಸಹಾಯಧನ ಇದ್ದಂತೆ. ಅವರ ಖಾತೆಗೆ ಹಣ ಹಾಕಬೇಕು ಎಂದೇನಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಕಿಡಿಕಾರಿದ್ದು, ಭ್ರಷ್ಟ ಸರ್ಕಾರ ತೊಲಗಿಸಲು ಕರೆ ನೀಡಿದ್ದಾರೆ.

ಸಿಲಿಗುರಿ: ‘ಬಡವರ ಸಬಲೀಕರಣಕ್ಕೆ ಅವರ ಬ್ಯಾಂಕ್‌ ಖಾತೆಗಳಿಗೆ ಹಣ ಹಾಕಬೇಕಾದ ಅಗತ್ಯವಿಲ್ಲ. ಬದಲಾಗಿ ಅವರಿಗೆ ಆಹಾರ, ನೀರು ಮುಂತಾದ ಮೂಲಸೌಕರ್ಯಗಳನ್ನು ಒದಗಿಸುವುದೇ ಅವರ ಪಾಲಿಗೆ ಶಾಶ್ವತ ಹಣ ನೀಡಿದಂತಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಮೂಲಕ ಕಾಂಗ್ರೆಸ್‌ ಸರ್ಕಾರ ಕರ್ನಾಟಕವೂ ಸೇರಿದಂತೆ ವಿವಿಧೆಡೆ ವಿಪಕ್ಷಗಳು ಜಾರಿಗೆ ತಂದಿರುವ ಗೃಹಲಕ್ಷ್ಮೀ, ಯುವನಿಧಿ, ಅಪ್ರೆಂಟಿಸ್‌ಶಿಪ್‌ ಸಹಾಯಧನದಂಥ ಗ್ಯಾರಂಟಿ ಯೋಜನೆಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಬಂಗಾಳದ ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗುವ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ. 

ನರೇಗಾ ನಕಲಿ ಜಾಬ್‌ಕಾರ್ಡ್‌ ಸೃಷ್ಟಿಸಿ ಕೇಂದ್ರ ಸರ್ಕಾರದ ಹಣವನ್ನು ಲೂಟಿ ಮಾಡಿ ಬಡವರಿಗೆ ಮೂಲಸೌಕರ್ಯವನ್ನು ಒದಗಿಸಲು ವಿಫಲವಾಗಿದೆ.

 ಈ ರೀತಿ ಎಡಪಕ್ಷಗಳ ಕಾಲದಿಂದಲೂ ಪಶ್ಚಿಮ ಬಂಗಾಳದ ಜನತೆಗೆ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಲಾಗಿದ್ದು, ಅಂತಹ ಸರ್ಕಾರವನ್ನು ಕಿತ್ತೊಗೆಯಲು ನಿಮಗೆ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಅವಕಾಶವಿದೆ’ ಎಂದು ಪರೋಕ್ಷವಾಗಿ ವಿಜೆಪಿಗೆ ಮತ ಹಾಕುವಂತೆ ಕರೆ ನೀಡಿದರು. 

ಕುಟುಂಬ ರಾಜಕಾರಣಕ್ಕೆ ಕಿಡಿ: ಇದೇ ವೇಳೆ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ ಅವರು, ‘ಕಾಂಗ್ರೆಸ್‌ ಪಕ್ಷವು ತಮ್ಮ ರಾಜಕುಟುಂಬದ ಕುಡಿಗಳನ್ನು ಬೆಳೆಸುವಲ್ಲಿ ನಿರತವಾಗಿದ್ದರೆ ಟಿಎಂಸಿ ಕೇವಲ ಪಕ್ಷದ ಅಳಿಯನನ್ನು ಉದ್ಧಾರ ಮಾಡುವಲ್ಲಿ ನಿರತವಾಗಿದೆ’ ಎಂದು ಮಮತಾ ಬಂಧು ಅಭಿಷೇಕ್‌ ಬ್ಯಾನರ್ಜಿಗೆ ಟಾಂಗ್‌ ನೀಡಿದರು.